Spread the love

ತಿಪಟೂರು: ನಗರದ ಬಂಡಿಹಳ್ಳಿಯಲ್ಲಿ ಚಿನ್ನ ಕಳ್ಳತನ ಮಾಡಿ ಮನೆಗೆ ಬೆಂಕಿ ಹಚ್ಚಿದ ಆರೋಪಿಯನ್ನು ನಗರ ಠಾಣೆ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಿನಾಂಕ 17.04.2026 ರಂದು ರಾತ್ರಿ ಸುಮಾರು 11.30 ಗಂಟೆಗೆ ಶ್ರೀಮತಿ ಲಕ್ಷ್ಮಿ (36), ಲೇಟ್ ಚಂದ್ರಶೇಖರ್ ಅವರ ಪತ್ನಿ, ಗಾರ್ಮೆಂಟ್ ಕಾರ್ಮಿಕರು,ತಿಪಟೂರು ನಗರದ ಬಂಡಿಹಳ್ಳಿಯಲ್ಲಿರುವ ಪ್ರಶಾಂತ್ ಅವರ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇವರ ಸ್ವಗ್ರಾಮ ಹಾಸನ ತಾಲ್ಲೂಕಿನ ಶಾಂತಿ ಗ್ರಾಮ ಹೋಬಳಿ ಉಪ್ಪಾರ ಹೊಸಹಳ್ಳಿ,ವಾಸಿಯಾದ ತಂಗಿ ಆಶಾ ಅವರಿಗೆ ಪರಿಚಯವಿರುವ ಅರಸೀಕೆರೆ ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯ ಬಸವೇಶ್ವರ ನಗರ (ಹೊಸಟ್ಟಿ) ನಿವಾಸಿ ಜಗದೀಶ್ ಈ ಹಿಂದೆ ಹಲವು ಬಾರಿ ಲಕ್ಷ್ಮಿ ಅವರ ಮನೆಗೆ ಬಂದಿದ್ದನು.
ಘಟನೆಯ ದಿನ ಸಂಜೆ ಸುಮಾರು 7.15 ಗಂಟೆಗೆ ಜಗದೀಶ್ ಮನೆಗೆ ಬಂದು “ನಿನ್ನ ತಂಗಿ ಎಲ್ಲಿದ್ದಾಳೆ?” ಎಂದು ಪ್ರಶ್ನಿಸಿ, ಆಕೆ ಇಲ್ಲ ಎಂದು ಹೇಳುತ್ತಿದ್ದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಲಕ್ಷ್ಮಿ ಮನೆಗೆ ಬೀಗ ಹಾಕಿ ಹತ್ತಿರದ ಗಂಗಾಮಣಿ ಅವರ ಮನೆಗೆ ತೆರಳಿದ್ದಾರೆ. ಅಲ್ಲಿಗೂ ಬಂದ ಜಗದೀಶ್ ಬೆದರಿಕೆ ಮುಂದುವರಿಸಿದ್ದಾನೆ.
ನಂತರ ಗಂಗಾಮಣಿ ಮತ್ತು ಅವರ ತಮ್ಮ ಅರುಣ್ ಮನೆ ಕಡೆ ತೆರಳಿ ಪರಿಶೀಲನೆ ನಡೆಸಿದಾಗ, ಮನೆಯ ಮೇಲ್ಛಾವಣಿಯಿಂದ ಜಗದೀಶ್ ಇಳಿದು ಬರುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಮನೆಯ ಕಿಟಕಿಯಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಲಕ್ಷ್ಮಿ ಮನೆಗೆ ತೆರಳಿ ನೋಡಿದಾಗ, ಬಾಗಿಲು ಜಖಂ ಆಗಿದ್ದು, ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ಆರಿಸಿದೆ.
ಬೆಂಕಿಯಿಂದ ಮನೆಯಲ್ಲಿದ್ದ ಕಬ್ಬಿಣದ ಬೀರು, ಅದರೊಳಗಿನ ಬಟ್ಟೆಗಳು ಹಾಗೂ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಟಿ.ವಿ., ಹಾಸಿಗೆ ಸೇರಿದಂತೆ ಅನೇಕ ವಸ್ತುಗಳು ಹಾನಿಗೊಳಗಾಗಿದ್ದು, ಸುಮಾರು ₹60,000 ನಷ್ಟ ಉಂಟಾಗಿದೆ.
ತಂಗಿ ಆಶಾ ಬಗ್ಗೆ ಮಾಹಿತಿ ನೀಡದ ಕಾರಣ ದ್ವೇಷದಿಂದ ಜಗದೀಶ್ ಮನೆ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ವಸ್ತುಗಳಿಗೆ ಬೆಂಕಿ ಹಚ್ಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಮೇರೆಗೆ ಠಾಣಾ ಮೊ.ನಂ. 60/2026ರಲ್ಲಿ ಕಲಂ 326(G), 324(5), 351(2), 331 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆ ವೇಳೆ ಆರೋಪಿ ಜಗದೀಶ್ ಮನೆಗೆ ಬೆಂಕಿ ಹಚ್ಚುವ ಮೊದಲು ಮನೆಯಲ್ಲಿದ್ದ ಚಿನ್ನವನ್ನು ಕದ್ದಿರುವುದು ಬಹಿರಂಗವಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿ ಕೈಕೋಳ ತೊಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!