ಉದ್ಘಾಟನೆ ನೆರವೇರಿಸಿದ ಕೆಪಿಸಿಸಿ ಸದಸ್ಯ ವಿ.ಯೋಗೇಶ್.
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕರಡಾಳು ಸಂತೆ ಮೈದಾನದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ “ಚಿಣ್ಣರ ಚಿಲಿಪಿಲಿ” ಶಾಲಾ ವಾರ್ಷಿಕೋತ್ಸವದ ಅಂಗವಾಗಿ ದಾನಿಗಳ ಸಂಪೂರ್ಣ ಸಹಕಾರದಿಂದ ನಿರ್ಮಿಸಲಾದ ಜ್ಞಾನ ಸೂರ್ಯ ಶಾಲಾ ಕಲಾಮಂದಿರ, ಶಾಲಾ ಪ್ರವೇಶ ದ್ವಾರ ಹಾಗೂ ಸಿಸಿ ರಸ್ತೆಗಳನ್ನು ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸರ್ಕಾರಿ ಶಾಲೆಗಳು ಇದೇ ರೀತಿಯಾಗಿ ಎಸ್‌ಡಿಎಂಸಿ, ಗ್ರಾಮಸ್ಥರು, ಪೋಷಕರು ಹಾಗೂ ದಾನಿಗಳ ಸಹಕಾರದಿಂದ ಸಬಲೀಕರಣಗೊಂಡರೆ ಯಾವುದೇ ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಹೇಳಿದರು. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉತ್ತಮ ಮೂಲಸೌಕರ್ಯ ಒದಗಿಸಿದರೆ ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಗ್ರಾಮೀಣ ಮಕ್ಕಳಲ್ಲಿ ಅಪಾರ ಪ್ರತಿಭೆ ಇದ್ದು, ಅವರಿಗೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸಿದರೆ ಅವರು ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.

ತಿಪಟೂರು ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಎಂ. ಉಮೇಶ್ ಗೌಡ ಮಾತನಾಡಿ, ಈ ಶಾಲೆ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಕೇವಲ ಒಂದು ಅಥವಾ ಎರಡು ಮಕ್ಕಳು ಮಾತ್ರ ಇದ್ದ ಶಾಲೆ ಇಂದು 19 ವಿದ್ಯಾರ್ಥಿಗಳ ದಾಖಲೆಯನ್ನು ಹೊಂದಿದ್ದು, ಉತ್ತಮ ಪ್ರಗತಿ ಸಾಧಿಸಿದೆ. ಹಿಂದಿನ ಮುಖ್ಯ ಶಿಕ್ಷಕಿ ಛಾಯಾ ಎನ್ ಹಾಗೂ ಪ್ರಸ್ತುತ ಮುಖ್ಯ ಶಿಕ್ಷಕರಾದ ಪಟ್ಟಾಭಿರಾಮ ಅವರ ಶ್ರಮದ ಫಲವಾಗಿ ಶಾಲೆಗೆ 2024–25ನೇ ಸಾಲಿನಲ್ಲಿ ಅತ್ಯುತ್ತಮ ಶಾಲಾ ಪ್ರಶಸ್ತಿ ಮತ್ತು 2025–26ನೇ ಸಾಲಿನಲ್ಲಿ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ದೊರೆತಿರುವುದು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಟಿ.ಕೆ. ಪಟ್ಟಾಭಿರಾಮ ಮಾತನಾಡಿ, ನಮ್ಮ ಶಾಲೆಯಲ್ಲಿ ದಾಖಲೆಯಾಗುವ ಪ್ರತಿಯೊಂದು ಮಗುವಿಗೂ ಸುಮಾರು ನಾಲ್ಕರಿಂದ ಐದು ಸಾವಿರ ರೂ. ಮೌಲ್ಯದ ಪ್ಯಾಕೇಜ್ ನೀಡಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ವಿಶೇಷ ಸಮವಸ್ತ್ರ, ಎರಡು ಜೋಡಿ ಶೂ ಹಾಗೂ ಸಾಕ್ಸ್, ಟೈ, ಬೆಲ್ಟ್, ಐಡಿ ಕಾರ್ಡ್, ಸ್ವೆಟರ್, ಟ್ರ್ಯಾಕ್ ಸೂಟ್, ಟಿ-ಶರ್ಟ್, ಬ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ಪ್ರತಿವರ್ಷ ದಾನಿಗಳ ಸಹಕಾರದಿಂದ ನೀಡಲಾಗುತ್ತಿದೆ ಎಂದು ಹೇಳಿದರು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ “ಚಿಣ್ಣರ ಚಿಲಿಪಿಲಿ” ಎಂಬ ವಿನೂತನ ಶಾಲಾ ವಾರ್ಷಿಕೋತ್ಸವವನ್ನು ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಪೋಷಕರ ಸಹಕಾರದಿಂದ ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜೊತೆಗೆ, ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕೆಂದು ಕೋರಿದರು. ಮುಂದಿನ ವರ್ಷದಿಂದ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಆರಂಭಿಸಲು ಸರ್ಕಾರ ಘೋಷಿಸಿರುವುದನ್ನು ಸ್ವಾಗತಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎನ್. ನರಸಿಂಹಮೂರ್ತಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ದಾನಿಗಳು, ಗ್ರಾಮಸ್ಥರು, ಪೋಷಕರು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ವರ್ಷ ನಮ್ಮ ಶಾಲೆಯನ್ನು ಸ್ಮಾರ್ಟ್ ಶಾಲೆಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಮೈಲಾರಯ್ಯ, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಶ್ರೀ ಗುರು ಗೋಲ್ಡ್ ಬಯ್ಯರ್ಸ್ ಮಾಲೀಕರಾದ ದೀಪು ಆನಂದ್, ಜಯ ಕರ್ನಾಟಕ ಮಲ್ಲೇಶ್ವರಂ ವಿ ಕ್ಷೇತ್ರದ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಬೆಂಗಳೂರು ಉತ್ತರ ಪ್ರಧಾನ ಕಾರ್ಯದರ್ಶಿ ಕೆ. ಕಾರ್ತಿಕ್ ಗೌಡ, ಶಿಕ್ಷಣ ಸಂಯೋಜಕ ಬಿ.ಆರ್.ಪಿ ಪ್ರಸನ್ನ ಮತ್ತು ಸಿಆರ್‌ಪಿ ವಸಂತ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಮಲ್ಲೇನಹಳ್ಳಿ ಕಾಂತರಾಜು, ನಟರಾಜ್, ಸಿದ್ದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





