ತಿಪಟೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಡಹುಟ್ಟಿದ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ತಿಪಟೂರು ತಾಲೂಕಿನ ಕಸಬಾ ಹೋಬಳಿಯ ಹುಚ್ಚನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹುಚ್ಚನಹಟ್ಟಿ ಗ್ರಾಮದ ನಿವಾಸಿ ರವಿಕುಮಾರ್ ಅವರು ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಅಣ್ಣ ಲೋಕೇಶ್ ಹಾಗೂ ರವಿಕುಮಾರ್ ನಡುವೆ 28 ಗುಂಟೆ ಜಮೀನಿನ ಹಂಚಿಕೆ ವಿಚಾರವಾಗಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿವೆ ಎನ್ನಲಾಗಿದೆ.
ಜಮೀನಿನ ಬಳಿ ರವಿಕುಮಾರ್ ತೆರಳಿದ್ದ ವೇಳೆ ಅಣ್ಣ-ತಮ್ಮಂದಿರ ನಡುವೆ ವಾಗ್ವಾದ ನಡೆದು ಗಲಾಟೆ ಉಂಟಾಗಿದೆ. ಈ ವೇಳೆ ಲೋಕೇಶ್ ತನ್ನ ತಮ್ಮ ರವಿಕುಮಾರ್ ಹಾಗೂ ಅವರ ಪತ್ನಿ ಗಾಯತ್ರಿ ಅವರ ಮೇಲೆ ಚಾಕುವಿನಿಂದ ಹಲ್ಲೇ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ರವಿಕುಮಾರ್ ಅವರ ದೇಹದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಚಾಕುವಿನ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳು ರವಿಕುಮಾರ್ ಹಾಗೂ ಗಾಯತ್ರಿ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್,ಮತ್ತು ಪುರುಷೋತ್ತಮ್ ಡಿವೈಎಸ್ಪಿ ಉಮೇಶ್, ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಹಾಗೂ ವೆಂಕಟೇಶ್, ಸಬ್ ಇನ್ಸ್ಪೆಕ್ಟರ್ ರಾಮಣ್ಣ, ಎಎಸ್ಐ ಮಂಜಣ್ಣ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ





