ತಿಪಟೂರು: ರಾಜ್ಯ ಸರ್ಕಾರದ ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ₹4.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.

ನಗರದ ಕೆ.ಆರ್. ಬಡಾವಣೆ, ಹೊಸಪಾಳ್ಯ, ಗಾಂಧೀನಗರ, ಕರಿಬಸಪ್ಪ ಕಾಲೋನಿ, ಕೋಟೆ, ಕೊಡಗೀಹಳ್ಳಿ, ಹುರುಳಿಹಳ್ಳಿ, ಬಿ. ಹೊಸೂರು, ಸಿಂಗೇನಹಳ್ಳಿ, ಬಸವನಹಳ್ಳಿ, ದಾಸಿಹಳ್ಳಿ, ಗಂಗನಘಟ್ಟ, ಕೊಪ್ಪ, ಚೌಡ್ಲಾಪುರ, ಕೆ.ಬಿ. ಕ್ರಾಸ್ ಹಾಗೂ ರಜತಾದ್ರಿಪುರ ಗ್ರಾಮಗಳಲ್ಲಿ 14 ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಹಾಗೂ ಕಬ್ಬಿನಕೆರೆ, ಚೌಲಿಹಳ್ಳಿ, ತಿಮ್ಲಾಪುರ ಮತ್ತು ಕೊಟ್ಟಿಗೆಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಹುರುಳಿಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ 15 ಅಂಗನವಾಡಿ ಕೇಂದ್ರಗಳು ಹಾಗೂ 4 ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಅನೇಕ ವರ್ಷಗಳಿಂದ ಹಲವಾರು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸುಮಾರು 40 ಅಂಗನವಾಡಿ ಕೇಂದ್ರಗಳ ನಿರ್ಮಾಣ ಹಾಗೂ 10 ಕೇಂದ್ರಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಅಗತ್ಯವಿರುವ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ ಜೊತೆಗೆ ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಹಾಗೂ ನಿವೇಶನಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ
ಅದೇ ರೀತಿ ವಿವಿಧ ಇಲಾಖೆಗಳ ಮೂಲಕ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಜೊತೆಗೆ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಅಕ್ಷರಜ್ಞಾನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್, ಸದಸ್ಯರಾದ ಶ್ರೀನಿವಾಸ್, ನದೀಮ್ ಪಾಷಾ, ಯೋಗೇಶ್, ಮಾಜಿ ತಾ.ಪಂ ಸದಸ್ಯ ಮಣಕಿಕೆರೆ ರವಿಕುಮಾರ್, ಗಂಗನಘಟ್ಟ ಶಿವಸ್ವಾಮಿ, ಘಟಿಕಿನಕೆರೆ ಚಿಕ್ಕಮಲ್ಲಯ್ಯ, ಹಾಲ್ಕುರಿಕೆ ಹೆಚ್.ಎಸ್. ಕುಮಾರಸ್ವಾಮಿ, ವಗ್ಗನಘಟ್ಟ ಯೋಗಣ್ಣ, ಶಶಿಧರ್, ಗುರುಗದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜು, ಜಿ.ಪಂ. ಎಇಇ ನಾಗೇಂದ್ರ, ಎಇ ಭೂಮಿಕಾ, ಗುತ್ತಿಗೆದಾರರಾದ ಮನೋಜ್ ಹಾಗೂ ಹೇಮಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ





