ತಿಪಟೂರು: ಕಲಾಕೃತಿ (ರಿ), ತಿಪಟೂರು, ಕಲ್ಪತರು ವಿದ್ಯಾಸಂಸ್ಥೆ,ಆದಿತ್ಯವಾಣಿ ಕನ್ನಡ ಪತ್ರಿಕೆ ಮತ್ತು ಸತ್ಯಕುಮಾರ್ ರಿಲೀಫ್ ಫೌಂಡೇಷನ್ಇವರ ಸಂಯುಕ್ತಾಶ್ರಯದಲ್ಲಿ
ಕಲಾಕೃತಿಯ 28ನೇ ವರ್ಷದ ವಾರ್ಷಿಕೋತ್ಸವ, ಆದಿತ್ಯವಾಣಿ ಪತ್ರಿಕೆಯ 25ನೇ ವರ್ಷದ ರಜತ ಮಹೋತ್ಸವ, ಅನ್ನಪೂರ್ಣ ಸಂಚಾರಿ ನಿತ್ಯ ಅನ್ನ ದಾಸೋಹ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಡಿನ ಸಾಹಿತ್ಯ ದಿಗ್ಗಜ, ಸಾಮಾಜಿಕ ಚಿಂತಕ, ನಾಡೋಜ ಸನ್ಮಾನ್ಯ ಶ್ರೀ ಬರಗೂರು ರಾಮಚಂದ್ರಪ್ಪ ಅವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ “ಕಲ್ಪತರು ರತ್ನ” ಪ್ರಶಸ್ತಿ ಪ್ರಧಾನ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು, . ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಕೆ.ಐ.ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ನವರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಬಂದಿದ್ದೆ.ಆಗ ನಾನು ಆಯ್ಕೆಯಾಗಿರಲಿಲ್ಲ. ಈಗ ಅದೇ ಸಂಸ್ಥೆಯಲ್ಲಿ ನನ್ನನ್ನು ಅತಿಥಿಯಾಗಿ ಸನ್ಮಾನ ಮಾಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ.
ಮೂಢನಂಬಿಕೆಯ ಕಾರಣದಿಂದ ನನ್ನ ಅಕ್ಕ ವೈದ್ಯರಿಗೆ ತೋರಿಸದೆ ತೀರಿಕೊಂಡರು. ತಂಗಿ ಧನುರ್ವಾಯು ಕಾರಣದಿಂದ ತೀರಿಕೊಂಡರು. ಆ ಕಾರಣದಿಂದ ನಾನು ವೈದ್ಯನಾಗಬೇಕೆಂದು ಬಯಸಿದ್ದುಂಟು.
ಶಿಕ್ಷಕರು ವಿದ್ಯಾರ್ಥಿಗಳ ಧರ್ಮ ಜಾತಿಯನ್ನು ನೋಡಬಾರದು.
ಅಂತಹ ಶಿಕ್ಷಕರು ನನಗೆ ಅಕ್ಷರ ಕಲಿಸಿದ್ದರಿಂದ ನನಗೆ ಅಕ್ಷರ ಅಹಂಕಾರವಾಗಲಿಲ್ಲ. ಅಕ್ಷರ ಅಂತಃಕರಣವಾಯಿತು.ಈ ಅಂತಃಕರಣದಿಂದಲೇ ನೀವು ನನಗೆ ಪ್ರಶಸ್ತಿಯನ್ನು ಕೊಟ್ಟಿದ್ದೀರಿ. ಬರಗೂರಿನವರಿಗೆ ತಿಪಟೂರು ಹಸಿರು ಭೂಮಿ ಇದ್ದಂತೆ. ಎರಡು ವರ್ಷಗಳ ಹಿಂದೆ ನಮ್ಮ ಊರಿನ ಕೆರೆ ಕೋಡಿ ಬಿಟ್ಟಿತು. 42 ವರ್ಷಗಳ ನಂತರ ನಮ್ಮ ಊರಿನ ಕೆರೆ ಕೋಡಿ ಬಿದ್ದಿರುವುದು. ನಾನು ಒಣ ಭೂಮಿಗೆ ಸೇರಿದವನು. ಹಸಿರು ಭೂಮಿ ಒಣ ಭೂಮಿಯನ್ನು ಸನ್ಮಾನ ಮಾಡುವುದು,ಪ್ರಶಂಶಿಸುವುದು ಬಹಳ ವಿಶೇಷವಾದದ್ದು.
ಬದುಕಿನಲ್ಲಿ ಕಲ್ಪತರು ಹಾಗೂ ಜಾಲಿ ಮರ ಎರಡು ಇರುತ್ತದೆ ರಾಜ್ಯ ದೇಶ ಏಕಮುಖಿಯಾಗಿರುವುದಿಲ್ಲ.ಅನೇಕ ವೈರುಧ್ಯಗಳಿರುತ್ತವೆ. ಹಸಿರು ಭೂಮಿ ಒಣ ಭೂಮಿ ಒಟ್ಟಿಗೆ ಸೇರುವುದು ವೈರುಧ್ಯಗಳನ್ನು ಒಂದು ಮಾಡುವ ಸಂಕೇತ.ಸೌಹಾರ್ದತೆಯ ಸಂಕೇತ. ಸೃಷ್ಟಿಯಲ್ಲಿ ಶ್ರೇಷ್ಠ ಕನಿಷ್ಠ ಎಂಬುದಿಲ್ಲ.ಎಲ್ಲದಕ್ಕೂ ಅದರದ್ದೆ ಆದ ಕರ್ತವ್ಯವಿದೆ.
ಕಾಗೆ ಕೋಗಿಲೆಯ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ.ಕೋಗಿಲೆಯ ಸಂತತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಕಾಗೆಯನ್ನು ನಿಕೃಷ್ಟ ಎಂದು ಏಕೆ ಕರೆಯಬೇಕು ?
ಎಲ್ಲರೂ ಅವರವರು ಬೆಳೆದು ಬಂದ ವಾತಾವರಣದಿಂದಲೇ ಪ್ರೇರಣೆ ಪಡೆಯುತ್ತಾರೆ.
ಸೌಹಾರ್ದಕ್ಕೆ ವಿರುದ್ಧವಾದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ನನ್ನಂತಹ ಅನೇಕರಿಗೆ ಆತಂಕವಾಗಿದೆ ನಮ್ಮ ಪರಂಪರೆಯು ಜಾತಿ,ಧರ್ಮ,ಭೇದ,ಭಾವ ಹೇಳಿಕೊಡಲಿಲ್ಲ. ಪಂಪನೆ ಶತಮಾನದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿದ. ಬಸವಣ್ಣನವರು ಹೊಸ ಧರ್ಮ ಕಟ್ಟಿದರು. ಕ್ರಿ.ಶ. 850ರಲ್ಲಿ ರಚನೆಯಾದ ಕವಿರಾಜಮಾರ್ಗದಲ್ಲಿ ನಾವು ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಬಸವಣ್ಣನವರ ದೇಹವೇ ದೇಗುಲವೆಂದು ಹೇಳಿದ್ದಾರೆ. ಗಾಂಧೀಜಿಯವರು ಆಸ್ತಿಕರಾಗಿದ್ದರು.ಆದರೆ ಎಂದಿಗೂ ತಾವು ನಂಬಿದ ದೇವರು ಧರ್ಮವನ್ನು ಸ್ವಾತಂತ್ರ ಹೋರಾಟಕ್ಕೆ ಬಳಸಲಿಲ್ಲ. ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು.
ಯಾವುದು ಪ್ರಜಾಸತ್ತಾತ್ಮಕವಲ್ಲವೋ ಅದು ಸೃಜನಶೀಲತೆಯಲ್ಲ. ಶಿಕ್ಷಣ ಕಲೆ ಸಾಹಿತ್ಯದ ಬಗ್ಗೆ ಮಾತನಾಡುವಾಗಲೆಲ್ಲ ಆತಂಕವಾಗುತ್ತದೆ. ಇಂದು ನಾವು ಮಾರುಕಟ್ಟೆ ಪ್ರಧಾನವಾಗಿರುವ ಸಮಾಜವನ್ನು ನೋಡುತ್ತಿದ್ದೇವೆ. ಮಾರುಕಟ್ಟೆಯು ಮೌಲ್ಯಗಳನ್ನು ನಾಶ ಮಾಡಬಾರದು. ಇಂದು ಶಿಕ್ಷಣವೂ ಉದ್ಯಮವಾಗಿದೆ ಮೌಲ್ಯಗಳು ಬೆಳೆಯಬೇಕಾದರೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು.ಸಂವಾದದಿಂದ ಹೆಚ್ಚು ಮೌಲ್ಯಗಳನ್ನು ಕಟ್ಟಿಕೊಳ್ಳಲು ಸಾಧ್ಯ.
ನಮ್ಮ ನಮ್ಮ ನಡುವೆ ಪರಸ್ಪರ ಮಾತು ಕಡಿಮೆಯಾಗುತ್ತಿದೆ ದ್ವೇಷ ವಿರೋಧ ಹೆಚ್ಚಾಗುತ್ತಿದೆ ಸಮಾಜದಲ್ಲಿ ಕಲುಷಿತವಾದ,ಆಘಾತಕಾರಿಯಾದ, ಅಮಾನವೀಯವಾದ ವಾತಾವರಣ ಸೃಷ್ಟಿಯಾಗುತ್ತಿದೆ. ದೇಶದಲ್ಲಿ ದಿನಕ್ಕೆ 85 ಮಹಿಳೆಯರ ಅತ್ಯಾಚಾರವಾಗುತ್ತಿದೆ ಒಂದು ಗಂಟೆಗೆ 51 ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಅತ್ಯಾಚಾರ ಪ್ರಕರಣ ಶೇಕಡ 7.1 ರಷ್ಟಿದೆ. ಈ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.
ಪ್ರಶಸ್ತಿಗಳು ನಮಗೆ ಬಂದಾಗ ನಾವು ಎಷ್ಟು ಮನುಷ್ಯರು ಎಂದು ಪ್ರಶ್ನಿಸಿಕೊಳ್ಳಬೇಕು.ಇಂದು ವಿವೇಕದ ಭಾಗವನ್ನು ಉದ್ರೇಕ ಆವರಿಸಿಕೊಂಡಿದೆ. ಹಿಂದೂ ಧರ್ಮವನ್ನು ನಂಬಿಯೂ ಸಹ ಎಲ್ಲ ಧರ್ಮದ ಜೊತೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಸತ್ಯದ ಜಾಗವನ್ನು ಅಸತ್ಯ, ಮಾನವೀಯತೆಯ ಜಾಗವನ್ನು ಮತೀಯತೆ ಆವರಿಸಿಕೊಂಡಿದೆ.ಇಂತಹ ಸಂದರ್ಭದಲ್ಲಿ ನಾವೆಲ್ಲಾ ಮನುಷ್ಯರಾಗಬೇಕು ನಮ್ಮಲ್ಲಿರುವ ಮೃಘೀಯತೆಯನ್ನು ನಾಶ ಮಾಡಿಕೊಳ್ಳಬೇಕು. ನಿಜವಾದ ಮನುಷ್ಯರಾಗಬೇಕು ಎಂದು ಹೇಳಿದರು.
ಕಲಾಕೃತಿ ಅಧ್ಯಕ್ಷರಾದ ಡಾ. ಜಿ.ಎಸ್.ಶ್ರೀಧರ್ ರವರು ಮಾತನಾಡಿ ನಾಡೋಜ ಬರಗೂರು ರಾಮಚಂದ್ರಪ್ಪನವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.ನಮ್ಮ ನಾಡಿನ ಹೇಳಿಗೆಗಾಗಿ ಕಲೆ,ಸಾಹಿತ್ಯ,ಸಂಗೀತ,ಸೇವೆಕಾರ್ಯಗಳ ಜೊತೆ ಹಲವಾರು ರಚನಾತ್ಮಕ ಕಾರ್ಯಗಳು, ನಡೆಯಲಿವೆ, ಸಹೃದ ನಾಗರೀಕರ ಸಹಕಾದಲ್ಲಿ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಪ್ರಾರಂಭಿಸಿ ಒಂದು ವರ್ಷವಾಗಿದ್ದು, ಸುಮಾರು 400 ಜನರಿಗೆ ಮಧ್ಯಾಹ್ನ ಅನ್ನದಾಸೋಹ ನಡೆಯುತ್ತಿದ್ದು ಎಲ್ಲರ ಸಹಕಾರದಿಂದ ನಿರಂತರವಾಗಿ ನಡೆಯಲಿದೆ ಎಂದರು,
ಕಾರ್ಯಕ್ರಮದಲ್ಲಿ ಕಲಾಕೃತಿ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ.ಎಸ್. ಶ್ರೀಧರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್, ಕಲ್ಪತರು ವಿದ್ಯಾ ಸಂಸ್ಥೆಯ ಪದಾಧಿಕಾರಿಗಳಾದ ಬಾಗೇಪಲ್ಲಿ ನಟರಾಜು, ಸಂಗಮೇಶ್, ಶಿವಪ್ರಸಾದ್. ಐ.ಎಫ್. ಡಬ್ಲ್ಯೂ. ಜೆ. ಪ್ರಧಾನ ಕಾರ್ಯದರ್ಶಿ ಮಧನ ಗೌಡ,ಕೆ.ಯು. ಡಬ್ಲ್ಯೂ.ಜೆ.ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್ ಕರೀಕೆರೆ,
ಕಲಾಕೃತಿ ಸಂಸ್ಥೆಯ ಪದಾಧಿಕಾರಿಗಳಾದ ಡಿ.ವಿ.ಎಸ್.ಗುಪ್ತ,ಬಿ.ಎಸ್. ಶಿವಪ್ರಸಾದ್, ಜ್ಯೋತಿ ಗಣೇಶ್, ಎ.ಟಿ. ಪ್ರಸಾದ್, ನಿರಂಜನ ಮೂರ್ತಿ, ತಿಪಟೂರು ಕೃಷ್ಣ, ಶೋಭಾ ಜಯದೇವ್, ಪ್ರಭಾ ವಿಶ್ವನಾಥ್ ಮಂಜುಳಾ ತಿಮ್ಮೇಗೌಡ ವೊಡಾಫೋನ್ ಚಂದ್ರು, ತರಕಾರಿ ಗಂಗಾಧರ್, ಕಲ್ಪತರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಭಾಗವಹಿಸಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ