ಡಿ. 31ರೊಳಗೆ ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಮಂಗಳ ಎಕ್ಸ್ಪ್ರೆಸ್ ರೈಲು ಮರು ಸಂಚಾರಕ್ಕೆ ಕ್ರಮ: ಸಚಿವರ ಭರವಸೆ
ತಿಪಟೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಪಟೂರಿಗೆ ಭೇಟಿ ನೀಡಿ ನಗರದ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ತಿಪಟೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ, ಹಾಸನ ರಸ್ತೆ ರೈಲ್ವೆ ಮೇಲುಸೇತುವೆ, ಹೊನ್ನವಳ್ಳಿ ರಸ್ತೆ ರೈಲ್ವೆ ಮೇಲ್ಸೇತುವೆ ಹಾಗೂ ಬಿ.ಎಚ್. ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ನಿರ್ಮಾಣವಾಗುತ್ತಿರುವ ಸ್ಕೈವಾಕ್ ಕಾಮಗಾರಿಗಳನ್ನು ವೀಕ್ಷಿಸಿ, ರೈಲ್ವೆ ಇಲಾಖೆ ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದರು.
ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಡಿಸೆಂಬರ್ 31ರೊಳಗೆ ಪ್ರಮುಖವಾಗಿ ಮೇಲುಸೇತುವೆ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಕಾಮಗಾರಿಗಳ ವೇಗ ಹೆಚ್ಚಿಸುವುದರ ಜೊತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಾಸನ-ಹಿರಿಯೂರು ಗ್ರೀನ್ಫೀಲ್ಡ್ ಕಾರಿಡಾರ್ ಯೋಜನೆ ಟೆಂಡರ್ ಹಂತದಲ್ಲಿದೆ. ಬೆಂಗಳೂರು-ತುಮಕೂರು ನಾಲ್ಕು ಪಥದ ರಸ್ತೆ ಕಾಮಗಾರಿಯ ಯೋಜನೆಯೂ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಎತ್ತಿನಹೊಳೆ ಸೇರಿದಂತೆ ನೀರಾವರಿ ಯೋಜನೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ತುಮಕೂರು-ತಿಪಟೂರು ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ವೇಗ ನೀಡುವಂತೆ ಮನವಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ನೆರವು ಒದಗಿಸಲು ಸಹಕಾರ ನೀಡುತ್ತೇನೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಶಿಕಿರಣ್, ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ರಾಮ್ ಮೋಹನ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ಚೇತನ್ ಕುಮಾರ್, ನಟರಾಜು, ಕೆರೆಗೋಡಿ ದೇವರಾಜು, ರಾಕೇಶ್ ಜಕ್ಕನಹಳ್ಳಿ, ಲಿಂಗರಾಜು ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳ ಎಕ್ಸ್ಪ್ರೆಸ್ ರೈಲು ಮರು ಸಂಚಾರಕ್ಕೆ ಮಹಿಳೆಯರ ಮನವಿ
ತಿಪಟೂರು: ಯಶವಂತಪುರದಿಂದ ತುಮಕೂರು, ತಿಪಟೂರು ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತಿದ್ದ ಮಂಗಳ ಎಕ್ಸ್ಪ್ರೆಸ್ ರೈಲನ್ನು ಪುನಃ ಆರಂಭಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂರಾರು ಮಹಿಳೆಯರು ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸದಸ್ಯೆ ಭಾರತಿ, ಮಂಗಳ ಎಕ್ಸ್ಪ್ರೆಸ್ ರೈಲಿನಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳುವವರು ಹಾಗೂ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಈ ರೈಲು ಸಹಕಾರಿಯಾಗಿತ್ತು ಎಂದರು.
ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು, ಉಜಿರೆ ಹಾಗೂ ಮೂಡುಬಿದಿರೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತುಮಕೂರು ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ರೈಲು ಇದಾಗಿತ್ತು. ರೈಲನ್ನು ಪುನಃ ಸಂಚಾರಕ್ಕೆ ತಂದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಮಹಿಳೆಯರಿಂದ ಮನವಿ ಸ್ವೀಕರಿಸಿದ ಸಚಿವ ವಿ. ಸೋಮಣ್ಣ ಮಾತನಾಡಿ, ಮಂಗಳ ಎಕ್ಸ್ಪ್ರೆಸ್ ರೈಲನ್ನು ತಿಪಟೂರು-ಅರಸೀಕೆರೆ ಮಾರ್ಗವಾಗಿ ಪುನಃ ಸಂಚರಿಸುವಂತೆ ಮಾಡುವ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಾರ್ವಜನಿಕರಿಂದಲೂ ಹಲವು ಬಾರಿ ಮನವಿಗಳು ಬಂದಿವೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ರೈಲು ಮರು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ