KALPATHARU KRANTHI

ದರ್ಶನ್‌ಗೆ ಜಾಮೀನು ಸಿಗಲಿ ಎಂದು ದೇವರ ಮೊರೆ ಹೋದ ವಿಜಯಲಕ್ಷ್ಮಿ

Spread the love

ತಿಪಟೂರಿನ ಚೌಲಿಹಳ್ಳಿ ಶ್ರೀ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ಪತ್ನಿ

ತಿಪಟೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾಮೀನು ದೊರೆಯಲಿ ಎಂದು ಪ್ರಾರ್ಥಿಸಿ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದೇವತೆ ಶ್ರೀ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದರ್ಶನ್ ಅವರಿಗೆ ಜಾಮೀನು ದೊರೆತು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿ ಎಂದು ದೇವಿಯ ಬಳಿ ವಿಜಯಲಕ್ಷ್ಮಿ ಮೊರೆ ಇಟ್ಟರು. ಈ ಸಂದರ್ಭದಲ್ಲಿ ದೇವರ ಅಪ್ಪಣೆ ಕೇಳಿದಾಗ, ಶೀಘ್ರದಲ್ಲಿಯೇ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಸೂಚನೆ ದೊರೆತಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಜೈಲಿನಿಂದ ಬಿಡುಗಡೆಯಾದರೆ ಪತಿಯೊಂದಿಗೆ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸುವುದಾಗಿ ವಿಜಯಲಕ್ಷ್ಮಿ ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ.

ನಂತರ ದೇವಾಲಯದ ಧೂತಯ್ಯ ಸ್ವಾಮಿಯ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದರು. ಈ ವೇಳೆ ಧೂತಯ್ಯ ಸ್ವಾಮಿ ಕುಟುಂಬಕ್ಕೆ ಅಭಯ ನೀಡುವುದರ ಜೊತೆಗೆ ದರ್ಶನ್ ಅವರಿಗೆ ಜಾಮೀನು ದೊರೆಯುವ ಕುರಿತು ಅಪ್ಪಣೆ ನೀಡಿದೆ ಎಂದು ಭಕ್ತರು ತಿಳಿಸಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನೂರಾರು ದರ್ಶನ್ ಅಭಿಮಾನಿಗಳು ಚೌಲಿಹಳ್ಳಿಯ ಶ್ರೀ ಕರಿಕಲ್ಲಮ್ಮ ದೇವಾಲಯದ ಬಳಿ ಜಮಾಯಿಸಿದ್ದರು.

ದೇವಾಲಯದ ಅರ್ಚಕರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದು, ಪೂಜಾ ಕೈಂಕರ್ಯಗಳಿಗೆ ಸಹಕರಿಸಿದರು.

ವರದಿ : ಮಂಜುನಾಥ್ ಹಾಲ್ಕುರಿಕೆ

Exit mobile version