ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಸಸ್ಯಯಜ್ಞ ತಂಡವು ಮೈಸೂರು ನಗರದಲ್ಲಿ ಆಯೋಜಿಸಿದ್ದ ‘ಕವಿತೆ ಹೇಳಿ, ಸಸಿ ಪಡೆಯಿರಿ’ ಅಭಿಯಾನಕ್ಕೆ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕವಿತೆ ಹೇಳಿ, ಸಸಿ ಪಡೆಯಿರಿ’ ಎಂಬ ವಿನೂತನ ಅಭಿಯಾನದ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವಿನ ಜೊತೆಗೆ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮುಂದಿನ ಪೀಳಿಗೆಗೆ ಸುಂದರ ಹಾಗೂ ಸ್ವಚ್ಛ ಪರಿಸರವನ್ನು ಬಿಟ್ಟುಹೋಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲರೂ ಸಸ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಸಾವಿರಾರು ವರ್ಷಗಳಿಂದ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತೀಕವಾಗಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ನಾಡಿಗೆ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರು, ನಿವೃತ್ತ ಯೋಧ ಮೂರ್ತಿ ಸೇರಿದಂತೆ ಸಸ್ಯಯಜ್ಞ ತಂಡದ ಸದಸ್ಯರು ಹಾಗೂ ಅನೇಕರು ಉಪಸ್ಥಿತರಿದ್ದರು.
ವಿ.ಯೋಗೇಶ್ ಅವರ ತಂದೆ ವೀರಯ್ಯ ಅವರ ಸ್ಮರಣಾರ್ಥ ಈ ವಿನೂತನ ಅಭಿಯಾನದಲ್ಲಿ 6 ಸಾವಿರ ಸಸಿಗಳನ್ನು ವಿತರಿಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ