KALPATHARU KRANTHI

ತಿಪಟೂರು ಜಿಲ್ಲೆ ಮಾಡಲು ಸಚಿವ ಸ್ಥಾನ ತ್ಯಾಗ: ಶಾಸಕ ಕೆ. ಷಡಕ್ಷರಿ.

Spread the love

: ಕಲ್ಪತರು ನಾಡು ತಿಪಟೂರನ್ನು ಜಿಲ್ಲಾಕೇಂದ್ರ ಮಾಡಿ, ಇಲ್ಲವೇ ಸಚಿವ ಸ್ಥಾನ ನೀಡಿ ಎಂದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರಲ್ಲಿ ಕೇಳಿದ್ದೇನೆ. ಜಿಲ್ಲಾಕೇಂದ್ರ ಮಾಡಲು ಸಚಿವ ಸ್ಥಾನ ತ್ಯಾಗ ಮಾಡಿದ್ದೇನೆ. ತಿಪಟೂರು ಜಿಲ್ಲೆ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ನನ್ನ ಧ್ಯೇಯವಾಗಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನೋತ್ಸವದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ಪೊಲೀಸ್, ಎನ್‌ಸಿಸಿ, ಗೃಹರಕ್ಷಕ ದಳ, ಸ್ಕೌಟ್ಸ್, ಗೈಡ್ಸ್ ಸೇರಿದಂತೆ ವಿವಿಧ ಶಾಲೆಗಳ ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಪಟೂರು ಜಿಲ್ಲೆಯಾಗಬೇಕು ಎನ್ನುವುದು ನನ್ನ ಕನಸು. ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ. ಜಿಲ್ಲೆಗಾಗಿ ಸಚಿವ ಸ್ಥಾನ ತ್ಯಾಗ ಮಾಡಿದ್ದೇನೆ. ತಿಪಟೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು, ನಗರ ಹಾಗೂ ಗ್ರಾಮೀಣ ಭಾಗಕ್ಕೆ ಅಗತ್ಯವಾದ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿಯ ಅಧಿವೇಶನದಲ್ಲಿ ತಿಪಟೂರು ನಗರಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುಮೋದನೆ ಪಡೆಯುತ್ತೇನೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೂ ಮಾತನಾಡಿದ್ದೇನೆ ಎಂದರು.
ದೇಶದಲ್ಲಿ ಅತಿವೃಷ್ಟಿ ಹಾಗೂ ಕೆಲವು ಭಾಗಗಳಲ್ಲಿ ಅನಾವೃಷ್ಟಿಗೆ ತುತ್ತಾಗಿದೆ. ಕರ್ನಾಟಕ ರಾಜ್ಯವೂ ತೀವ್ರ ಮಳೆ ಅಭಾವದಿಂದ ಭೀಕರ ಬರಗಾಲಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬರ ಅಧ್ಯಯನ ನಡೆಸಿ, ಬರ ನಿರ್ವಹಣೆಗೆ ಕ್ರಮ ಕೈಗೊಂಡಿದೆ ಎಂದರು.
ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಕಟ್ಟಿರುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಕಟ್ಟಬೇಕು. ದೇಶದ ಮಹಾನ್ ನಾಯಕರು ಹಲವಾರು ಸಂಸ್ಥೆಗಳನ್ನು ಕಟ್ಟಿಬೆಳೆಸಿದರು. ಆದರೆ ಅಂತಹ ಮಹಾನ್ ಸಂಸ್ಥೆಗಳನ್ನು ಸ್ವಹಿತಾಸಕ್ತಿಯ ವ್ಯಕ್ತಿಗಳ ಕೈಗೆ ಕೊಟ್ಟು ದೇಶವನ್ನು ಹಾಳು ಮಾಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.


ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ, ರಾಜಮಹಾರಾಜರ ಕಾಲದಲ್ಲಿ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದ್ದ ಭಾರತ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ತನ್ನ ಶ್ರೀಮಂತಿಕೆಯನ್ನು ಕಳೆದುಕೊಂಡು ಗುಲಾಮಗಿರಿ ಅನುಭವಿಸಬೇಕಾಯಿತು. ಭಾರತ ಸ್ವತಂತ್ರವಾಗಬೇಕು ಎನ್ನುವ ಮಹದಾಸೆಯೊಂದಿಗೆ ಹೋರಾಟ ನಡೆಸಿದ ಸಾವಿರಾರು ಜನರ ಪ್ರಾಣಾರ್ಪಣೆ, ತ್ಯಾಗ ಹಾಗೂ ಬಲಿದಾನದಿಂದ ದೇಶ ಸ್ವತಂತ್ರಗೊಂಡಿತು ಎಂದರು.
ಹಲವಾರು ಅಡೆತಡೆಗಳನ್ನು ಎದುರಿಸಿ ದೇಶ ಹಲವಾರು ರಂಗಗಳಲ್ಲಿ ಅಭಿವೃದ್ಧಿ ಹೊಂದಿದೆ. ಹಲವು ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಕೀರ್ತಿ ತಂದಿದೆ. ದೇಶದ ಅಭಿವೃದ್ಧಿಗೆ ಪಾತ್ರರಾಗುವ ಮೂಲಕ ದೇಶಸೇವೆಯಲ್ಲಿ ನಾವು ಕೈಜೋಡಿಸೋಣ. ಭಾರತ ಮಾತೆಯ ಮಕ್ಕಳೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ ನಾಡು ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು.


ಅಗ್ನಿಶಾಮಕ ದಳದಿಂದ ತುರ್ತು ಅವಘಡಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ತಹಶೀಲ್ದಾರ್ ಮೋಹನ್ ಕುಮಾರ್, ಡಿವೈಎಸ್‌ಪಿ ಎಂ.ಎಚ್. ಉಮೇಶ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್. ಕಾಂತರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version