ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ.
ತಿಪಟೂರು: ನೀಟ್ ಅಕ್ರಮ ಖಂಡಿಸಿ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ತಿಪಟೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರ ರಾಜೀನಾಮೆ ವಿದ್ಯಾರ್ಥಿ ಸಮೂಹದ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಕಠಿಣ ಹೋರಾಟದ ಮೂಲಕ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿದ ದೇಶಭಕ್ತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸಂಭ್ರಮ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ತಿಪಟೂರು ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್, ಕೇಂದ್ರ ಸರ್ಕಾರ ನೀಟ್ ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಪರೀಕ್ಷಾ ಅಕ್ರಮದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗದಿಂದ ವಂಚಿತರಾಗಿದ್ದಾರೆ. ಭ್ರಷ್ಟ ಪರೀಕ್ಷಾ ವ್ಯವಸ್ಥೆಯಿಂದ ಮನನೊಂದ ಸುಮಾರು 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಲಜ್ಜ ವ್ಯವಸ್ಥೆಯ ವಿರುದ್ಧ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಯಿತು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಪಟ್ಟ ಕಟ್ಟಿ ಅಮಾನುಷ್ಯವಾಗಿ ದೌರ್ಜನ್ಯ ನಡೆಸಿ, ಪೊಲೀಸ್ ಬಲಪ್ರಯೋಗದ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರು. ಆದರೆ ವಿದ್ಯಾರ್ಥಿಗಳು ತಮ್ಮ ಅಚಲವಾದ ನಿಲುವಿನಿಂದ ಹಿಂದೆ ಸರಿಯದೆ ಹೋರಾಟ ಮಾಡಿದ ಫಲವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ಶ್ರೇಯಸ್ಸು ಹೋರಾಟ ನಿರತ ದೇಶಭಕ್ತ ವಿದ್ಯಾರ್ಥಿ ಸಮೂಹಕ್ಕೆ ಸಲ್ಲಬೇಕು.
ಕೇಂದ್ರ ಸರ್ಕಾರ ಕೂಡಲೇ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು. ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ನೀಟ್ ಹಾಗೂ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುತ್ತಿರುವ ಕೇಂದ್ರ ಪರೀಕ್ಷಾ ಮಂಡಳಿಯನ್ನು ರದ್ದುಗೊಳಿಸಬೇಕು. ನೀಟ್ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಕೇಂದ್ರ ಸರ್ಕಾರವೇ ಪಾರದರ್ಶಕ ಹಾಗೂ ಕಠಿಣವಾಗಿ ನಡೆಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿರುವ ವ್ಯಕ್ತಿಗಳು ದೊಡ್ಡ ದೊಡ್ಡ ಕೋಚಿಂಗ್ ಸೆಂಟರ್ ಹಾಗೂ ಕಾಲೇಜುಗಳೊಂದಿಗೆ ಶಾಮೀಲಾಗಿ, ನೀಟ್ ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಪ್ರಜಾಪ್ರಭುತ್ವ ವಿರೋಧಿ ಧೋರಣೆ ಮುಂದುವರೆದರೆ ಕಾನೂನು ಭಂಗ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಖ್ಯಾತ ವೈದ್ಯ ಡಾ. ಅನಿಲ್ ಮಾತನಾಡಿ, ಕೇಂದ್ರ ಸರ್ಕಾರ ಏಕೀಕೃತ ಪರೀಕ್ಷಾ ವ್ಯವಸ್ಥೆ ಜಾರಿಗೆ ತಂದ ನಂತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚು ಅನ್ಯಾಯವಾಗಿದೆ. ಕೇಂದ್ರ ಪರೀಕ್ಷಾ ಮಂಡಳಿ ಖಾಸಗಿ ಒಡೆತನದಲ್ಲಿರುವ ಕಾರಣ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಒಡಿಶಾ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಕೋಚಿಂಗ್ ಸೆಂಟರ್ ಹಾಗೂ ಕಾಲೇಜುಗಳು ಲಾಭ ಮಾಡಿಕೊಂಡು ನೀಟ್ ಸೇರಿದಂತೆ ಕೇಂದ್ರದ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಹಿಂದೆ ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಪ್ರಭಾವಿಗಳ ಕಪಿಮುಷ್ಟಿಯೂ ಇದೆ. ಸರ್ಕಾರ ಕೂಡಲೇ ಕೇಂದ್ರ ಪರೀಕ್ಷಾ ಮಂಡಳಿಯನ್ನು ರದ್ದುಗೊಳಿಸಬೇಕು. ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಕೇಂದ್ರ ಸರ್ಕಾರವೇ ಪರೀಕ್ಷೆ ನಡೆಸಬೇಕು. ಪಾರದರ್ಶಕ ಹಾಗೂ ಪ್ರಾಮಾಣಿಕ ಪರೀಕ್ಷಾ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ದೇವರಾಜು, ಪ್ರಾಂತ ರೈತ ಸಂಘದ ಅಧ್ಯಕ್ಷ ಚನ್ನಬಸವಣ್ಣ, ಸೌಹಾರ್ದ ತಿಪಟೂರು ಅಧ್ಯಕ್ಷ ಅಲ್ಲಾಭಕ್ಷು, ಸಂವಿಧಾನ ರಕ್ಷಣಾ ಪಡೆ ಅಧ್ಯಕ್ಷ ಲೋಕೇಶ್, ಬೆಳೆ ಕಾವಲು ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೆಳಹಟ್ಟಿ, ಮುಖಂಡರಾದ ಶರತ್, ಎಂ.ಬಿ. ಉಮಾಮಹೇಶ್ .ಅಹಿಂಸ ಅಧ್ಯಕ್ಷ ಕಿರಣ್ ರಾಜ್ ಹರಚನಹಳ್ಳಿ. ರಾಜಮ್ಮಸಂವಿಧಾನ ರಕ್ಷಣಾಪಡೆ ಅಧ್ಯಕ್ಷ ಲೋಕೇಶ.ಸಾದತ್.. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ