KALPATHARU KRANTHI

ಖ್ಯಾತ ಚಲನಚಿತ್ರ ನಟ ಶ್ರೀನಾಥ್‌ಗೆ ‘ಹೊಯ್ಸಳ ರತ್ನ’ ಪ್ರಶಸ್ತಿ ಪ್ರದಾನ.

Spread the love

ತಿಪಟೂರು: ತಿಪಟೂರು ಸ್ಮಾರ್ತ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಖ್ಯಾತ ಕನ್ನಡ ಚಲನಚಿತ್ರ ನಟ, ಪ್ರಣಯರಾಜ ಶ್ರೀನಾಥ್ ಅವರಿಗೆ ‘ಹೊಯ್ಸಳ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಾಥ್, ಬ್ರಾಹ್ಮಣ ಸಮಾಜವು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಅಧ್ಯಯನಶೀಲತೆ, ಉತ್ತಮ ಸಂಸ್ಕಾರ ಹಾಗೂ ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ. ಷಡಕ್ಷರಿ ಮಾತನಾಡಿ, ಬ್ರಾಹ್ಮಣ ಸಮಾಜವು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಜನಸಂಖ್ಯೆ ಕಡಿಮೆಯಿದ್ದರೂ ದೇವರ ಪೂಜೆ–ಪುನಸ್ಕಾರಗಳನ್ನು ನಡೆಸಿಕೊಂಡು ಸಂಸ್ಕಾರವಂತ ಜೀವನ ನಡೆಸುತ್ತಿರುವ ಈ ಸಮಾಜಕ್ಕೆ ಸರ್ಕಾರದ ಸವಲತ್ತುಗಳು ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ದೊರೆಯುವ ವಿವಿಧ ಯೋಜನೆಗಳು ಹಾಗೂ ಸವಲತ್ತುಗಳನ್ನು ಸಮಾಜದವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ವೇಳೆ ಸಮಾಜದ ಅಭಿವೃದ್ಧಿಗಾಗಿ ತಮ್ಮ ಅನುದಾನದಿಂದ ₹5 ಲಕ್ಷ ನೀಡುವುದಾಗಿ ಘೋಷಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಮಾತನಾಡಿ, ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದು, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಹೆಚ್ಚಿನ ಸರ್ಕಾರಿ ಸವಲತ್ತುಗಳು ದೊರೆಯುವಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಖ್ಯಾತ ವೈದ್ಯ ಡಾ. ವೇಣುಗೋಪಾಲ್, ಮೈಸೂರು ಸಂಘದ ಅಧ್ಯಕ್ಷ ಸತ್ಯನಾರಾಯಣ್, ತಿಪಟೂರು ಸ್ಮಾರ್ತ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ರವಿ ಶಾಸ್ತ್ರಿ, ಸಮಾಜದ ಮುಖಂಡರಾದ ಅಂಬಿಕಾ ರಾಮಚಂದ್ರ, ಹಿರಿಯಣ್ಣಯ್ಯ ಚಂದ್ರಶೇಖರ್ ಹೊನ್ನವಳ್ಳಿ ರಾಮಣ್ಣ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version