KALPATHARU KRANTHI

ಹಣಬಲದಿಂದ ಪಕ್ಷ ಸಂಘಟನೆ ಸಾಧ್ಯವಿಲ್ಲ, ಜನಬಲ ಗಳಿಸಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಸಚ್ಚಿದಾನಂದ ಮೂರ್ತಿ.

Spread the love

ತಿಪಟೂರು: ಹಣಬಲದಿಂದ ಏನನ್ನೂ ಸಾಧಿಸಲಾಗದು. ಜನಸಂಘಟನೆಯಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಇಂತಹ ಬಲಿಷ್ಠ ಸಂಘಟನೆಯನ್ನು ಬಿಜೆಪಿ ಹೊಂದಿದ್ದು, ಇದನ್ನು ಅರ್ಥೈಸಿಕೊಂಡು ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ರಾಜ್ಯ ಬಿಜೆಪಿ ಮುಖಂಡ ಸಚ್ಚಿದಾನಂದ ಮೂರ್ತಿ ಹೇಳಿದರು.


ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ-2ಗಳ ಸಮಾವೇಶ ಮತ್ತು ಎಸ್‌ಐಆರ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು.
ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಎ-2ಗಳು ಜವಾಬ್ದಾರಿಯಿಂದ ಪಾಲ್ಗೊಂಡು ಸುಳ್ಳು ಮತದಾರರನ್ನು ಪಟ್ಟಿಯಿಂದ ತೆಗೆಸುವ ಸಂಕಲ್ಪ ಮಾಡಬೇಕು. ಬಿಜೆಪಿ ತಳಮಟ್ಟದ ಕಾರ್ಯಕರ್ತರನ್ನು ಹೊಂದಿರುವ ದೇಶದ ಏಕೈಕ ದೊಡ್ಡ ಪಕ್ಷವಾಗಿದ್ದು, ಇಂತಹ ಕಾರ್ಯಕರ್ತರ ಬಳಗ ಬೇರೆ ಯಾವುದೇ ಪಕ್ಷದಲ್ಲಿ ಇಲ್ಲ. ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯಬಹುದು ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ.
ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇವಲ ಮೇಸ್ತ್ರಿ ಕೆಲಸ ಮಾಡುವುದಲ್ಲದೆ, ಸ್ವಯಂ ಪ್ರೇರಣೆಯಿಂದ ಎಸ್‌ಐಆರ್ ಕಾರ್ಯದಲ್ಲಿ ತೊಡಗಿಸಿಕೊಂಡು ಅರ್ಹ ಮತದಾರರನ್ನು ಗುರುತಿಸುವ ಹಾಗೂ ನಕಲಿ ಮತದಾರರನ್ನು ತೆಗೆಸುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದು ಬಿಎಲ್‌ಎಗಳಿಗೆ ಕರೆ ನೀಡಿದರು.


ಪಕ್ಷದ ಬಿಎಲ್‌ಎಗಳು ಮಾನ್ಯತೆ ಪಡೆದವರಾಗಿದ್ದು, ಚುನಾವಣಾ ಆಯೋಗ ನೇಮಿಸುವ ಅಧಿಕಾರಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಬೆಳೆಸಬೇಕು. ಅವರಿಂದಲೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಬೇಕು,ಇನ್ನೂ ಎರಡು ತಿಂಗಳು ನಡೆಯಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾರ್ಯಕರ್ತರು ಚುನಾವಣಾ ಕಾರ್ಯಕ್ಕೆ ಶ್ರಮಿಸಿ, ಬಿಎಲ್‌ಎಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿ ನಾಯ್ಕರ್ ಎಸ್‌ಐಆರ್ ಕುರಿತು ತಾಂತ್ರಿಕ ಮಾಹಿತಿಯನ್ನು ನೀಡಿದರು.
ಕಾರ್ಯಗಾರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಳ, ಉಪಾಧ್ಯಕ್ಷ ಗಂಗರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್, ನಗರ ಅಧ್ಯಕ್ಷ ಜಗದೀಶ್, ಯುವ ಮುಖಂಡರಾದ ವಿಶ್ವದೀಪ್ ನಾಗೇಶ್, ಬಿಎಲ್‌ಎ ಅಧ್ಯಕ್ಷ ಬಿಸಲೆಹಳ್ಳಿ ಜಗದೀಶ್, ಮುಖಂಡರಾದ ಶಂಕರಪ್ಪ, ಪ್ರಸನ್ನಕುಮಾರ್, ಗಂಗಾಧರ್, ಸುರೇಶ್, ರಾಮ್, ಮನು ಕುಪ್ಪಾಳು, ಸಂತೋಷ್, ಶಶಿಕಿರಣ್, ಸಂಧ್ಯಾಕಿರಣ್, ಅಶೋಕ್, ಗಿರೀಶ್, ಜಕ್ಕನಹಳ್ಳಿ ರವಿ ಸೇರಿದಂತೆ ಅನೇಕ ಮುಖಂಡರು ಹಾಗೂ ಎಲ್ಲಾ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಸದಸ್ಯರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version