ತಿಪಟೂರು : ಮುಸ್ಲಿಮರ ಪವಿತ್ರ ಹಬ್ಬವಾದ ತ್ಯಾಗ ಮತ್ತು ಬಲಿದಾನದ ಸಂಕೇತ ಬಕ್ರೀದ್ ಹಬ್ಬವನ್ನು ತಿಪಟೂರಿನಲ್ಲಿ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಈದ್ಗಾ ಮೈದಾನದ ಪಕ್ಕದಲ್ಲಿರುವ ಖಬರ್‌ಸ್ಥಾನಕ್ಕೆ ತೆರಳಿ ತಮ್ಮ ಹಿರಿಯರ ಚಿರಶಾಂತಿ ಹಾಗೂ ಸ್ವರ್ಗಪ್ರಾಪ್ತಿಗಾಗಿ ಧರೂದ್ ಪಠಿಸಿ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಮರ ಸಾಮೂಹಿಕ ನಮಾಜ್ ಉದ್ದೇಶಿಸಿ ಬಿಲಾಲ್ ಮಸೀದಿ ಮುತ್ತವಲ್ಲಿ ಷಫಿ ಉಲ್ಲಾ ಷರೀಫ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲೆಂದು ಎಲ್ಲಾ ಮುಸ್ಲಿಮರು ಅಲ್ಲಾಹನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರವಾದಿ ಫೈಗಂಬರ್ ಅವರು ತಮ್ಮ ಮಗನನ್ನು ಬಲಿದಾನ ಮಾಡಲು ಮುಂದಾದಾಗ ಅಲ್ಲಾಹ ಅವರು ಅವರ ನಿಷ್ಠೆಯನ್ನು ಪರೀಕ್ಷಿಸಿ ಕುರಿಯನ್ನು ಬಲಿದಾನ ಮಾಡಲು ಸೂಚಿಸಿದರು. ಅಂದಿನಿಂದ ಬಕ್ರೀದ್ ಹಬ್ಬವನ್ನು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ದೇಶದ ಎಲ್ಲಾ ನಾಗರಿಕರು ಪರಸ್ಪರ ಸಹಬಾಳ್ವೆಯಿಂದ ಬದುಕಬೇಕು ಎಂದು ಕರೆ ನೀಡಿದ ಅವರು, ಜಮಾಅತ್-ಉಲ್-ಉಲ್ಮಾ-ಎ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಹರ್ಷದ್ ಮದನಿ ಅವರು ಹಿಂದೂ–ಮುಸ್ಲಿಮರು ಸೌಹಾರ್ದತೆಯಿಂದ ಬದುಕಬೇಕು, ಹಿಂದೂಗಳು ಗೌರವಿಸುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂಬ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತವಿದೆ ಎಂದರು.
ವಕ್ಫ್ ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ಸಮೀ ಉಲ್ಲಾ ಖಾನ್ ಮಾತನಾಡಿ, ಬಕ್ರೀದ್ ಶಾಂತಿ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಹಿಂದೂ–ಮುಸ್ಲಿಮರು ಒಗ್ಗಟ್ಟಿನಿಂದ ಬದುಕಬೇಕು. ನಮ್ಮ ಹಬ್ಬಗಳಲ್ಲಿ ನೀವು ಭಾಗವಹಿಸಬೇಕು, ನಿಮ್ಮ ಹಬ್ಬಗಳಲ್ಲಿ ನಾವು ಭಾಗವಹಿಸಿ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.
ಪ್ರಾರ್ಥನಾ ಸಭೆಯಲ್ಲಿ ಮದೀನಾ ಮಸೀದಿ ಮುತ್ತವಲ್ಲಿ ಮಹಮ್ಮದ್ ದಸ್ತಗೀರ್, ಜಾಮಿಯಾ ಮಸೀದಿ ಮುತ್ತವಲ್ಲಿ ಸಲೀಂ ಅಹಮದ್, ನೂರಾನಿ ಮಸೀದಿ ಮುತ್ತವಲ್ಲಿ ತನ್ವೀರ್ ಉಲ್ಲಾ ಷರೀಫ್, ವಕ್ಫ್ ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ಸಮೀ ಉಲ್ಲಾ ಖಾನ್, ಡಿ.ಎಸ್.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫರ್ವೇಜ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ