ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ನಡೆದ ಸಭೆಗೆ ಗೈರಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಮೂವರು ಉಪಾಧ್ಯಕ್ಷರು ಹಾಗೂ 29 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ವಜಾಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಮೇ 24ರಂದು ಬೆಂಗಳೂರಿನ ಹೊರವಲಯದಲ್ಲಿ ಎಸ್‌ಐಆರ್ ಪ್ರಕ್ರಿಯೆ, ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ (ದಾವಣಗೆರೆ), ಬಾಬುರಾವ್ ಜಗೀರ್ದಾರ್ (ಕಲಬುರಗಿ) ಹಾಗೂ ಎಂ.ಸಿ. ವೇಣುಗೋಪಾಲ್ (ಬೆಂಗಳೂರು) ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಅದೇ ರೀತಿ ಪ್ರಧಾನ ಕಾರ್ಯದರ್ಶಿಗಳಾದ ತುಮಕೂರಿನ ನಿಕೇತ್ ರಾಜ್ ಮೌರ್ಯ, ತಿಪಟೂರಿನ ಸಿ.ಬಿ. ಶಶಿಧರ್, ನಟಿ ಭಾವನಾ ರಾಮಣ್ಣ, ಕೆ.ಸಿ. ಪ್ರಭಾಕರ್ ರೆಡ್ಡಿ, ತಿಬ್ಬೇಗೌಡ, ಜುಲ್ಪಿಕರ್ ಅಹ್ಮದ್, ಶಂಕರ್ ದೊಡ್ಡಿ, ರೇಖಾ ಹುಲಿಯಪ್ಪ, ಎಚ್.ಎ. ಷಣ್ಮುಗಪ್ಪ, ಎಂ. ರಾಮಪ್ಪ, ಷಣ್ಮುಗಪ್ಪ ಶಿವಳ್ಳಿ, ಸಿ.ಆರ್. ಮನೋಹರ್, ಎಚ್.ಆರ್. ಶ್ರೀನಾಥ್, ನಾಗೇಶ್ವರ್ ರಾವ್ ಸೇರಿದಂತೆ ಒಟ್ಟು 29 ಮಂದಿ ಪ್ರಧಾನ ಕಾರ್ಯದರ್ಶಿಗಳಿಗೆ ಡಿ.ಕೆ. ಶಿವಕುಮಾರ್ ಗೇಟ್ ಪಾಸ್ ನೀಡಿದ್ದಾರೆ.
ಪಕ್ಷದ ಸಭೆಗೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದರು. ಅವರ ಸೂಚನೆಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿ :ಮಂಜುನಾಥ್ ಹಾಲ್ಕುರಿಕೆ
