: ಇ-ಫಾರ್ಮಸಿ ಹಾಗೂ ಆನ್‌ಲೈನ್ ಔಷಧಿ ವಿತರಣೆಯನ್ನು ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಒಕ್ಕೂಟ ಕರೆ ನೀಡಿರುವ ಒಂದು ದಿನದ ಬಂದ್‌ಗೆ ತಿಪಟೂರು ಔಷಧಿ ವ್ಯಾಪಾರಿಗಳ ಸಂಘ ಬೆಂಬಲ ಸೂಚಿಸಿದೆ. ಆದರೆ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಮೆಡಿಕಲ್ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ವ್ಯಾಪಾರಿಗಳು ಎಡಗೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಾಲ್ಲೂಕು ಮೆಡಿಕಲ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಸುಮಾರು 27 ಸಾವಿರಕ್ಕೂ ಅಧಿಕ ಮೆಡಿಕಲ್ ಅಂಗಡಿಗಳಿದ್ದು, ತಿಪಟೂರು ನಗರದಲ್ಲೇ ಅಂದಾಜು 120ಕ್ಕೂ ಹೆಚ್ಚು ಔಷಧಿ ಅಂಗಡಿಗಳಿವೆ. ಅನೇಕ ಕುಟುಂಬಗಳು ಇದೇ ವ್ಯಾಪಾರವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಹೆಚ್ಚಿನ ಬಾಡಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಮನೆಮನೆಗೆ ಔಷಧಿ ವಿತರಣೆ ಹೆಚ್ಚುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಸರ್ಕಾರ ಆನ್‌ಲೈನ್ ವ್ಯಾಪಾರಕ್ಕೆ ತಾತ್ಕಾಲಿಕ ಅವಕಾಶ ನೀಡಿತ್ತು. ನಂತರದಲ್ಲಿ ಅಧಿಕೃತ ಅನುಮತಿ ನೀಡದಿದ್ದರೂ, ಕೆಲವರು ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಔಷಧಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು
“ಮೆಡಿಕಲ್ ಗಳಲ್ಲಿ ವೈದ್ಯರು ನೀಡಿದ ಚೀಟಿಯನ್ನು ಪರಿಶೀಲಿಸಿದ ನಂತರವೇ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಆನ್‌ಲೈನ್ ವ್ಯಾಪಾರದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಔಷಧಿಗಳು ಲಭ್ಯವಾಗುತ್ತಿವೆ. ಇದರಿಂದ ಯುವ ಪೀಳಿಗೆ ದುರುಪಯೋಗಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿದೆ”
“ಮೊಬೈಲ್ ಮೂಲಕ ನಿದ್ದೆ ಮಾತ್ರೆಗಳು, ಪ್ರಜ್ಞೆ ತಪ್ಪಿಸುವ ಔಷಧಿಗಳು ಹಾಗೂ ಮಾದಕ ಗುಣದ ಮಾತ್ರೆಗಳು ಸುಲಭವಾಗಿ ದೊರೆಯುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದ ದೇಶದ ಭವಿಷ್ಯಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆನ್‌ಲೈನ್ ಔಷಧಿ ವಹಿವಾಟನ್ನು ನಿಯಂತ್ರಿಸಬೇಕು” ಎಂದು.
ಕಲ್ಪಶ್ರೀ ಮೆಡಿಕಲ್ ಮಾಲೀಕ ಪ್ರಸನ್ನ ಕುಮಾರ್ ಆತಂಕ ವ್ಯಕ್ತಪಡಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ
