ತಿಪಟೂರು: ತಾಲ್ಲೂಕಿನ ಕೆ.ಬಿ ಕ್ರಾಸ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಎಟಿಎಂ ಡಿಜಿಟಲ್ ಲಾಕರ್ ಒಡೆದು ಹಣ ಕಳವು ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮೇ 5ರ ರಾತ್ರಿ, ಕೆ.ಬಿ ಕ್ರಾಸ್‌ನ ಮಾತಾ ರೆಸಿಡೆನ್ಸಿ ಆವರಣದಲ್ಲಿ ಇರುವ ಎಸ್‌ಬಿಐ ಬ್ಯಾಂಕ್‌ಗೆ ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರ ಗುಂಪು, ಎಟಿಎಂ ಯಂತ್ರವನ್ನು ಹಾನಿಗೊಳಿಸಿ ಅದರ ಡಿಜಿಟಲ್ ಲಾಕರ್ ಒಡೆದು ಹಾಕಿದೆ. ಬಳಿಕ ಯಂತ್ರದಲ್ಲಿದ್ದ ಸುಮಾರು ₹5,94,400 ನಗದು ಹಣವನ್ನು ದರೋಡೆ ಮಾಡಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಕೆ.ಬಿ ಕ್ರಾಸ್ ಪೊಲೀಸರು ಹಾಗೂ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದರು.
ತಿಪಟೂರು ಡಿವೈಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ಸಬ್ ಇನ್ಸ್‌ಪೆಕ್ಟರ್ ನಾಗರಾಜು ಹಾಗೂ ಸ್ನಿಫರ್ ಟೀಂ
ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ :ಮಂಜುನಾಥ್ ಹಾಲ್ಕುರಿಕೆ
