KALPATHARU KRANTHI

ಪ್ರಯಾಣಿಕರು ಬಿಟ್ಟುಹೋದ ₹85 ಸಾವಿರ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ.

Spread the love

ತಿಪಟೂರು, ಮೇ 3: , ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟುಹೋದ ₹85 ಸಾವಿರ ನಗದು ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿ ಹಿಂತಿರುಗಿಸಿ ತಿಪಟೂರುವಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಿಪಟೂರು ಘಟಕದ ವಾಹನ ಸಂಖ್ಯೆ 876 ಚನ್ನರಾಯಪಟ್ಟಣದಿಂದ ತಿಪಟೂರಿಗೆ ಸಂಚರಿಸುತ್ತಿದ್ದ ಬಸ್ಸಿಗೆ ಜಂಬೂರು ನಿವಾಸಿಗಳಾದ ನವೀನ್ ಹಾಗೂ ಅಂಕಿತ ದಂಪತಿಗಳು ಪ್ರಯಾಣಿಸಿದ್ದರು. ಜಂಬೂರಿನಲ್ಲಿ ಇಳಿಯುವ ವೇಳೆ ಅವರು ತಮ್ಮ ಪರ್ಸ್‌ನ್ನು ಬಸ್ಸಿನ ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು.
ಪರ್ಸ್‌ನಲ್ಲಿ ಬಂಗಾರದ ಒಡವೆಗಳನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರವಿ ಇಟ್ಟು ಪಡೆದಿದ್ದ ₹85 ಸಾವಿರ ನಗದು ಹಾಗೂ ಇತರ ಪ್ರಮುಖ ದಾಖಲೆಗಳು ಇದ್ದವು.
ನುಗ್ಗೆಹಳ್ಳಿ ಬಳಿ ವಾರಸುದಾರರಿಲ್ಲದೆ ಬಿದ್ದಿದ್ದ ಪರ್ಸ್‌ನ್ನು ಗಮನಿಸಿದ ನಿರ್ವಾಹಕ ದಯಾನಂದ್ ಅವರು ತಕ್ಷಣ ಚಾಲಕ ಜಗದೀಶ್ ಅವರ ಗಮನಕ್ಕೆ ತಂದರು. ಬಳಿಕ ಪರ್ಸ್ ಪರಿಶೀಲನೆ ನಡೆಸಿದಾಗ ಅದರಲ್ಲಿ ₹85 ಸಾವಿರ ನಗದು ಹಾಗೂ ದಾಖಲೆಗಳು ಇರುವುದನ್ನು ಕಂಡು, ತಕ್ಷಣ ಡಿಪೋ ವ್ಯವಸ್ಥಾಪಕ ಹಾಗೂ ಸಂಚಾರಿ ನಿಯಂತ್ರಕ ಸುನೀಲ್ ಕುಮಾರ್ ಅವರಿಗೆ ಮಾಹಿತಿ ನೀಡಿದರು.
ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ನವೀನ್ ಹಾಗೂ ಅಂಕಿತ ದಂಪತಿಗಳನ್ನು ಸಂಪರ್ಕಿಸಿ ತಿಪಟೂರು ಬಸ್ ನಿಲ್ದಾಣಕ್ಕೆ ಕರೆಯಿಸಲಾಯಿತು. ನಂತರ ನಿರ್ವಾಹಕ ದಯಾನಂದ್ ಹಾಗೂ ಚಾಲಕ ಜಗದೀಶ್ ಅವರು ಸಂಚಾರಿ ನಿಯಂತ್ರಕರ ಸಮ್ಮುಖದಲ್ಲಿ ಹಣ ಹಾಗೂ ದಾಖಲೆಗಳನ್ನು ಹಸ್ತಾಂತರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನವೀನ್ ಹಾಗೂ ಅಂಕಿತ, “ಕಷ್ಟದ ಸಂದರ್ಭಕ್ಕಾಗಿ ಒಡವೆಗಳನ್ನು ಗಿರವಿ ಇಟ್ಟು ಹಣ ತಂದಿದ್ದೆವು. ಆದರೆ ಆಕಸ್ಮಿಕವಾಗಿ ಪರ್ಸ್ ಬಸ್ಸಿನಲ್ಲಿ ಬಿಟ್ಟು ಹೋಗಿದ್ದೆವು. ನಮ್ಮ ಹಣ ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ದೇವರ ಸಮಾನರು” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಪ್ರಾಮಾಣಿಕತೆ ಮೆರೆದ ತಿಪಟೂರು ಘಟಕದ ಸಿಬ್ಬಂದಿಯಾದ ದಯಾನಂದ್ ಹಾಗೂ ಜಗದೀಶ್ ಅವರನ್ನು ಸಂಸ್ಥೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version