KALPATHARU KRANTHI

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಿಪಟೂರು ಜಿಲ್ಲೆಗೆ ಪ್ರಥಮ ಸ್ಥಾನ: ಶಾಸಕ ಕೆ. ಷಡಕ್ಷರಿ ಹರ್ಷ.

Spread the love

ತಿಪಟೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಿಪಟೂರು ತಾಲೂಕು ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ. ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಾಧನೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರಸಭೆ ಆವರಣದಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಿಪಟೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದರ ಜೊತೆಗೆ ರಾಜ್ಯಮಟ್ಟದಲ್ಲಿಯೂ ಉತ್ತಮ ಸ್ಥಾನ ಪಡೆದಿರುವುದು ಸಂತೋಷ ತಂದಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ ಎಂದರು.
ನಮ್ಮ ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಮಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಪರಿಶ್ರಮ ಶ್ಲಾಘನೀಯವಾಗಿದೆ.
ತಾಲೂಕಿನಲ್ಲಿ ಒಟ್ಟು 1144 ಬಾಲಕರು ಮತ್ತು 1107 ಬಾಲಕಿಯರು ಸೇರಿ 2251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 2190 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 97.29 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ನಳಂದ ಆಂಗ್ಲ ಶಾಲೆಯ ವಿದ್ಯಾರ್ಥಿ ಮಣಿಕಂಠ ಕೆ. 625 ಅಂಕಗಳಿಗೆ 621 ಅಂಕ ಗಳಿಸಿದ್ದಾನೆ. ಶ್ರೀಮದ್ ರಂಭಾಪುರಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಸ್ಮಯ ಜಿ.ಆರ್. 625ಕ್ಕೆ 621 ಅಂಕ ಹಾಗೂ ಪ್ರಜ್ವಲ್ ಎಂ.ಪಿ. 625ಕ್ಕೆ 619 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಸರ್ಕಾರಿ ಶಾಲೆಗಳು ಶೇಕಡಾ 96.56 ಫಲಿತಾಂಶ ಪಡೆದಿರುವುದು ಸಂತಸ ತಂದಿದ್ದು, ಮುಂದಿನ ವರ್ಷ ಇನ್ನಷ್ಟು ಉತ್ತಮ ಸಾಧನೆ ಮಾಡಲು ಇದು ಪ್ರೋತ್ಸಾಹವಾಗಿದೆ ಎಂದು ತಿಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಮಣಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಮೂರು ಹಂತಗಳಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಿ ಮಕ್ಕಳ ಮೌಲ್ಯಮಾಪನ ಮಾಡಿ ಪರೀಕ್ಷಾ ತಯಾರಿಗಾಗಿ ವಿಶೇಷ ತರಬೇತಿ ನೀಡಲಾಯಿತು. ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಶಿಕ್ಷಕರು ಹಾಗೂ ಪೋಷಕರು ಸಹಕಾರ ನೀಡಿದ ಕಾರಣ ಉತ್ತಮ ಫಲಿತಾಂಶ ಸಾಧ್ಯವಾಯಿತು ಎಂದರು.
ಮರುಪರೀಕ್ಷೆ-2 ಮತ್ತು 3ರಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಪ್ರಸಕ್ತ ಸಾಲಿನಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಮಾಧ್ಯಮಗಳಲ್ಲಿ ಬೋಧನೆ ಮಾಡಲಾಗುವುದು. ನಲಿಕಲಿ ಬದಲಾಗಿ ಮೋನೊಗ್ರೇಡ್ ತರಗತಿಗಳನ್ನು ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ, ಶಾಸಕರ ಮಾರ್ಗದರ್ಶನದಂತೆ ಎಲ್ಲಾ ಶಾಲೆಗಳ ಶಿಕ್ಷಕರ ಸಭೆ ನಡೆಸಿ ಮಕ್ಕಳಿಗೆ ಅಗತ್ಯ ತರಬೇತಿ ನೀಡಲಾಯಿತು. ಕೆಡಿಪಿ ಸಭೆಯಲ್ಲಿ ಶಾಸಕರು ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಶಾಲೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಅಗತ್ಯ ಮಾರ್ಗದರ್ಶನ ನೀಡಿತ್ತು. ವಿಷಯಾಧಾರಿತ ಶಿಕ್ಷಕರು ಕೊರತೆ ಇರುವ ಕಡೆ ಬೇರೆಕಡೆಯಿಂದ ಹೆಚ್ಚುವರಿ ಶಿಕ್ಷಕರನ್ನ ನಿಯೋಜನೆ ಮಾಡಿ ತರಬೇತಿ ಹಾಗೂ ಕಲಿಕೆಗೆ ಹೆಚ್ಚು ಗಮನ ಕೊಟ್ಟ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version