ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಆರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಅದ್ದೂರಿಯಾಗಿ ನೆರವೇರಿಸಲಾಯಿತು.

ಶ್ರೀ ಶಂಕರ ಆರಾಧನೆ ಅಂಗವಾಗಿ ಆದಿ ಜಗದ್ಗುರು ಶ್ರೀಶಂಕರಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ, ಪವಮಾನ ಸೂಕ್ತ ಅಭಿಷೇಕ, ತಿಪಟೂರಿನ ಶಾರದಾ ಸತ್ಸಂಗ ಮಹಿಳಾ ಮಂಡಳಿಯವರಿಂದ ಶಂಕರ ಸ್ತೋತ್ರ ಪಾರಾಯಣ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಜಗದ್ಗುರು ಶ್ರೀ ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾರ್ಚನೆ ಹಾಗೂ ಗಿರಿಜಾ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬೆಲಗೂರು ಶ್ರೀ ಮಾರುತಿ ಗುರುಪೀಠದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶ್ರೀ ವಿಜಯಮಾರುತಿ ಶರ್ಮ ಸ್ವಾಮೀಜಿ ಮಾತನಾಡಿ, ಆದಿ ಶಂಕರಾಚಾರ್ಯರು ಲೋಕಕಲ್ಯಾಣಕ್ಕಾಗಿ ಅವತರಿಸಿ ಅದ್ವೈತ ಸಿದ್ಧಾಂತದ ಮೂಲಕ ಭಾರತದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಕಾರಣರಾದರು. ಸಮಸ್ತ ಸಮಾಜವು ಆದಿ ಜಗದ್ಗುರುಗಳು ತೋರಿಸಿದ ದಾರಿಯಲ್ಲಿ ನಡೆಯಬೇಕು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ತುಮಕೂರು ಶಂಕರ ಮಠದ ಮಠಮುದ್ರೆಗಳಾದ ವೇದಮೂರ್ತಿ ಬ್ರಹ್ಮಶ್ರೀ ಶ್ರೀಧರ್ ಜೋಯಿಸ್ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಸ್ವಾಗತಿಸಿದರು.ಖ್ಯಾತ ವೈದ್ಯರಾದ ಡಾ.ಸ್ವರೂಪ್ ಸುಬ್ಬರಾವ್ ಸೇರಿದಂತೆ ಅನೇಕರು ಭಾಗವಹಿಸಿ ಪೂಜೆಸಲ್ಲಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ