KALPATHARU KRANTHI

ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ಕುಟುಂಬಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣರಿಂದ ₹3 ಲಕ್ಷ ಪರಿಹಾರದ ಚೆಕ್ ವಿತರಣೆ.

Spread the love

ತಿಪಟೂರು: ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಮಾಟನಹಳ್ಳಿ ಗ್ರಾಮದ ಎರಡು ಕುಟುಂಬಗಳಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ವೈಯಕ್ತಿಕವಾಗಿ ₹3 ಲಕ್ಷ ಪರಿಹಾರ ಧನವನ್ನು ಹಸ್ತಾಂತರಿಸಿದರು. ಸಚಿವರ ಪರವಾಗಿ ಬಿಜೆಪಿ ಮುಖಂಡ ಶಶಿಕಿರಣ್ ಸಂತ್ರಸ್ತರಿಗೆ ಚೆಕ್ ವಿತರಿಸಿದರು.


ಏಪ್ರಿಲ್ 19ರಂದು ರಾತ್ರಿ ಮಾಟನಹಳ್ಳಿ ಗ್ರಾಮದ ಸಣ್ಣ ತಿಮ್ಮಯ್ಯ ಹಾಗೂ ವೆಂಕಟರಮಣೇಗೌಡ ಅವರ ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿತ್ತು. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿ, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ವಿ. ಸೋಮಣ್ಣ ಅವರು, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹1.5 ಲಕ್ಷದಂತೆ ಎರಡು ಕುಟುಂಬಗಳಿಗೆ ಒಟ್ಟು ₹3 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಕೊಟ್ಟ ಮಾತಿನಂತೆ, ಬಿಜೆಪಿ ಮುಖಂಡ ಶಶಿಕಿರಣ್ ಮೂಲಕ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಸಭೆ ಮಾಜಿ ಸದಸ್ಯ ಶಶಿಕಿರಣ್, ಸಚಿವ ವಿ. ಸೋಮಣ್ಣ ಅವರು ಮಾಟನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ನೀಡಿದ ಭರವಸೆಯಂತೆ ಪರಿಹಾರಧನ ನೀಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಆರ್ಥಿಕ ನೆರವು ದೊರಕಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಮುಖಂಡರಾದ ಕೆರೆಗೋಡಿ ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷ ರಾಮ್ ಮೋಹನ್, ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ನೊಣವಿನಕೆರೆ ವಿಕಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version