ತಿಪಟೂರು: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಮಾಟನಹಳ್ಳಿ ಗ್ರಾಮದ ಕುಟುಂಬಗಳಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವ ವಿ. ಸೋಮಣ್ಣ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ತಾವು ವೈಯಕ್ತಿಕವಾಗಿ ₹3 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಏಪ್ರಿಲ್ 19ರಂದು ರಾತ್ರಿ ನೊಣವಿನಕೆರೆ ಹೋಬಳಿಯ ಮಾಟನಹಳ್ಳಿ ಗ್ರಾಮದ ಸಣ್ಣ ತಿಮ್ಮಯ್ಯ ಹಾಗೂ ವೆಂಕಟರಮಣೇಗೌಡ ಅವರ ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿ, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಸ್ಥಳಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹1.5 ಲಕ್ಷದಂತೆ ಎರಡು ಕುಟುಂಬಗಳಿಗೆ ಒಟ್ಟು ₹3 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಆರ್ಥಿಕ ನೆರವು ದೊರಕಿಸುವುದಾಗಿ ಹೇಳಿದರು.
ಬೆಸ್ಕಾಂ, ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡಿರುವುದು ನೋವಿನ ಸಂಗತಿ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾನವೀಯ ನೆರವು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅಧಿಕಾರಿಗಳು ಈ ಕುಟುಂಬಗಳಿಗೆ ಹೆಚ್ಚಿನ ನೆರವು ಒದಗಿಸುವ ದೃಷ್ಟಿಯಿಂದ ವಸ್ತುನಿಷ್ಠ ವರದಿ ಸಲ್ಲಿಸಬೇಕು. ನಾನು ಕೇಂದ್ರದ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮುಖಂಡ ಶಶಿಕಿರಣ್ ಹಸ್ತ ಅವರು ನಾಳೆಯೇ ವೈಯಕ್ತಿಕ ಪರಿಹಾರದ ಚೆಕ್ ಅನ್ನು ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ಬೆಸ್ಕಾಂ ವಿಭಾಗೀಯ ಅಧೀಕ್ಷಕ ಸೋಮನಾಥ್ ಗೌಡ, ವೃತ್ತ ನಿರೀಕ್ಷಕ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಶಶಿಕಿರಣ್, ಆಯರಹಳ್ಳಿ ಶಂಕರಪ್ಪ, ಕೆರೆಗೋಡಿ ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷ ರಾಮ್ ಮೋಹನ್, ಬಿಸ್ಲೇಹಳ್ಳಿ ಜಗದೀಶ್, ಹರೀಸಮುದ್ರ ಗಂಗಾಧರ್, ಜೆಡಿಎಸ್ ಮುಖಂಡ ಹುಣಸೇಘಟ್ಟ ಪ್ರಕಾಶ್, ನೊಣವಿನಕೆರೆ ರಾಕೇಶ್, ವಿಕಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ