: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ತಿಪಟೂರು ತಾಲೂಕು ತುಮಕೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ತಾಲೂಕಿನಲ್ಲಿ ಒಟ್ಟು 2,251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 2,190 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 61 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಒಟ್ಟು ಫಲಿತಾಂಶ 97.29% ದಾಖಲಾಗಿದೆ.
ಈ ಬಾರಿ 1,107 ಬಾಲಕಿಯರು ಪರೀಕ್ಷೆ ಬರೆದಿದ್ದು, ಅವರಲ್ಲಿ 1,083 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಫಲಿತಾಂಶ 97.83% ಆಗಿದೆ. ಅದೇ ರೀತಿ 1,144 ಬಾಲಕರು ಪರೀಕ್ಷೆ ಬರೆದಿದ್ದು, 1,107 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕರ ಫಲಿತಾಂಶ 96.77% ಆಗಿದೆ.
ತಾಲೂಕಿನ ಸರ್ಕಾರಿ ಶಾಲೆಗಳ ಫಲಿತಾಂಶ 96.56%, ಅನುದಾನಿತ ಶಾಲೆಗಳ ಫಲಿತಾಂಶ 96.90% ಹಾಗೂ ಅನುದಾನರಹಿತ ಶಾಲೆಗಳ ಫಲಿತಾಂಶ 98.96% ಆಗಿದೆ. 600ಕ್ಕಿಂತ ಹೆಚ್ಚು ಅಂಕಗಳನ್ನು 59 ವಿದ್ಯಾರ್ಥಿಗಳು ಪಡೆದಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ನಳಂದ ಪ್ರೌಢಶಾಲೆಯ ಮಣಿಕಂಠ ಕೆ. ಅವರು 621 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಮದ್ ರಂಭಾಪುರಿ ಆಂಗ್ಲ ಪ್ರೌಢಶಾಲೆಯ ವಿಸ್ಮಯ ಜಿ.ಆರ್. ಅವರು 620 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಅದೇ ಶಾಲೆಯ ಪ್ರಜ್ವಲ್ ಎಂ.ಪಿ. ಅವರು 619 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಗ್ರೇಡ್‌ವಾರು ಫಲಿತಾಂಶದಲ್ಲಿ A+ ಶ್ರೇಣಿಯನ್ನು 264 ವಿದ್ಯಾರ್ಥಿಗಳು, A ಶ್ರೇಣಿಯನ್ನು 344 ವಿದ್ಯಾರ್ಥಿಗಳು, B+ ಶ್ರೇಣಿಯನ್ನು 475 ವಿದ್ಯಾರ್ಥಿಗಳು, B ಶ್ರೇಣಿಯನ್ನು 419 ವಿದ್ಯಾರ್ಥಿಗಳು, C+ ಶ್ರೇಣಿಯನ್ನು 397 ವಿದ್ಯಾರ್ಥಿಗಳು ಹಾಗೂ C ಶ್ರೇಣಿಯನ್ನು 291 ವಿದ್ಯಾರ್ಥಿಗಳು ಪಡೆದಿದ್ದಾರೆ.
ತಾಲೂಕಿನ 50 ಶಾಲೆಗಳ ಪೈಕಿ 31 ಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿವೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಮಣಿ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಿಪಟೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದು, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ
