KALPATHARU KRANTHI

ತಿಪಟೂರು ಟೈಮ್ಸ್ ಪಿಯು ಕಾಲೇಜು ವಿದ್ಯಾರ್ಥಿನಿಗೆ ರಾಜ್ಯದಲ್ಲಿ 4ನೇ ರ್ಯಾಂಕ್ –ಟೈಮ್ಸ್ ಗಂಗಾಧರ್ ಸಂತಸ.

Spread the love

ತಿಪಟೂರು: ನಗರದ ಪ್ರತಿಷ್ಠಿತ ಟೈಮ್ಸ್ ಶಿಕ್ಷಣ ಸಂಸ್ಥೆಯ ಟೈಮ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಕೆ.ಎಸ್ ಅವರು 600ರಲ್ಲಿ 595 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.


ನಗರದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬೆಂಗಳೂರು, ಮಂಗಳೂರು ಸೇರಿದಂತೆ ನಗರ ಪ್ರದೇಶದ ವಿದ್ಯಾರ್ಥಿಗಳು ಸಾಧನೆ ಮಾಡುವುದು ಸಾಮಾನ್ಯ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಗಳಿಸಿರುವುದು ಶ್ಲಾಘನೀಯ,ನಮ್ಮ
ಕಾಲೇಜು ಈ ಬಾರಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಒಟ್ಟು 100 ವಿದ್ಯಾರ್ಥಿಗಳಲ್ಲಿ 66 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು, ಉಳಿದ 34 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನಮ್ಮ ಕಾಲೇಜಿನ ಸಿಂಚನಾ 589 ಅಂಕ, ಮೊಯಿನ್ ಖಾನ್ 588 ಅಂಕ, ಧನ್ಯಾ 587 ಅಂಕ, ಮೇಘನಾ 587 ಅಂಕ, ಸಹನಾ 582 ಅಂಕ, ಇಂಚರಾ 582 ಅಂಕ ಹಾಗೂ ಯಶ್ವಂತ್ 581 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ರ್ಯಾಂಕ್ ಗಳಿಸಬೇಕು ಎಂಬ ಉದ್ದೇಶದಿಂದ ಪರಿಶ್ರಮ ಪಡಲಾಗಿದ್ದು, ಫಲಿತಾಂಶ ತೃಪ್ತಿಕರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಆಶಯವಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ರಾಜ್ಯ ಮಟ್ಟದ ರ್ಯಾಂಕ್ ಗಳಿಸಿರುವುದು ಹೆಮ್ಮೆಯ ವಿಷಯ. ಸಾಮಾನ್ಯ ಅಂಕಗಳಿಸಿದ ವಿದ್ಯಾರ್ಥಿಗಳಿಗೂ ಉತ್ತಮ ತರಬೇತಿ ನೀಡಿ ಉತ್ತಮ ಫಲಿತಾಂಶ ತರುವಲ್ಲಿ ಶಿಕ್ಷಕ ವರ್ಗ ಯಶಸ್ವಿಯಾಗಿದೆ ಎಂದು ತಿಳಿಸಿದರು.


ಎಐ ಇಂಜಿನಿಯರಿಂಗ್ ಕನಸು ಬಿಚ್ಚಿಟ್ಟ ಟಾಪರ್:
ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿರುವ ರಶ್ಮಿ ಕೆ.ಎಸ್ ಮಾತನಾಡಿ, ಹೆಚ್ಚಿನ ಅಂಕಗಳನ್ನು ಪಡೆದಿರುವುದು ಸಂತಸ ತಂದಿದೆ. ಕಾಲೇಜಿನ ಬೋಧಕ ವರ್ಗ ನೀಡಿದ ತರಬೇತಿ ಹಾಗೂ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು. ಪೋಷಕರ ಪ್ರೋತ್ಸಾಹವೂ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲಿ ಎಐ ಇಂಜಿನಿಯರಿಂಗ್ ಅಭ್ಯಾಸ ಮಾಡುವುದು ನನ್ನ ಕನಸು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಪ್ರದೀಪ್ ಹಾಗೂ ಆಡಳಿತಾಧಿಕಾರಿ ಅನೂಫ್ ಉಪಸ್ಥಿತರಿದ್ದರು. ಟೈಮ್ಸ್ ಕಾಲೇಜು ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version