KALPATHARU KRANTHI

ಜಿಲ್ಲಾಧಿಕಾರಿಗಳ ಗೈರಿನಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನಸಂಪರ್ಕ ಸಭೆ. ಸಾರ್ವಜನಿಕರ ಬೇಸರ.

Spread the love

ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬಬೇಕು: ಅಪರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ.

ತಿಪಟೂರು: ರೈತರು ಹಾಗೂ ನೊಂದ ಜನರಿಗೆ ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಬೇಕು. ಸಂಕಷ್ಟದಲ್ಲಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಅವರ ಮನೋಬಲ ಹೆಚ್ಚುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ ಹೇಳಿದರು.


ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಪರಿಹಾರವಾಗುವ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗುವುದು. ಜಟಿಲ ಸಮಸ್ಯೆಗಳ ಕುರಿತು ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಸಭೆನಡೆಸಲಾಗುತ್ತಿದ್ದು. ಪರಿಹಾರ ಕಲ್ಪಿಸಲಾಗುವುದು.
ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಐಪಿಜಿಆರ್ಎಸ್ ಪೋರ್ಟಲ್‌ನಲ್ಲಿ ದಾಖಲಿಸಿ, ಅರ್ಜಿಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ತಮ್ಮ ಜಮೀನುಗಳ ಪಹಣಿಯನ್ನು ಪ್ರತಿವರ್ಷ ಪರಿಶೀಲಿಸಿ ಅದರ ಪ್ರತಿಯನ್ನು ಪಡೆದು ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವುದಾದರೂ ತಪ್ಪು ಕಂಡುಬಂದರೆ ತಕ್ಷಣ ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರ ಪೌತಿ ಆಂದೋಲನ ಹಾಗೂ ದುರಸ್ತಿ ಆಂದೋಲನ ನಡೆಸುತ್ತಿದ್ದು, ತಾಲ್ಲೋಕಿನಲ್ಲಿ 800 ಸಾವಿರ ಪೌತಿ ವಾರಸು ಪ್ರಕರಣಗಳು ಇತ್ಯಾರ್ಥವಾಗಿವೆ.ಜಮೀನು ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು.


ತಾಲ್ಲೂಕಿನ ಹಾಲ್ಕುರಿಕೆ, ಭದ್ರಪುರ ಹಾಗೂ ಕಾಗೇಹಳ್ಳಿ ಕಾವಲು ಪ್ರದೇಶಗಳಲ್ಲಿ ರೈತರು ಬೆಳೆ ಬೆಳೆದಿರುವ ಜಮೀನಿಗೆ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿರುವ ಬಗ್ಗೆ ರೈತರು ದೂರು ನೀಡಿದರು. ಸಮಸ್ಯೆಯನ್ನು ಆಲಿಸಿದ ಅಪರ ಜಿಲ್ಲಾಧಿಕಾರಿಗಳು, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಭೂಮಿ ವಿವಾದ ಇರುವ ಸ್ಥಳಗಳಿಗೆ ಲ್ಯಾಂಡ್ ಸೆಟಲ್‌ಮೆಂಟ್ ಅಧಿಕಾರಿ ನೇಮಕ ಮಾಡಲಾಗಿದೆ. ಫಲಾನುಭವಿಗಳು ಅವರ ಬಳಿ ದೂರು ನೀಡಿದರೆ ಸ್ಥಳ ಪರಿಶೀಲನೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಸಮಸ್ಯೆಗೆ ಪರಿಹಾರ ಸಿಗುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡಬಾರದು ಎಂದು ಸೂಚಿಸಿದರು.
ಪೆದ್ದಿಹಳ್ಳಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ಅಧಿಕಾರಿಗಳು ತಕ್ಷಣ ಸ್ಪಂದಿಸುವ ಮನೋಭಾವ ಹೊಂದಬೇಕು ಎಂದು ಹೇಳಿದರು. ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.


ತಾಲ್ಲೂಕಿನ ಮಾಯಗೊಂಡನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಮನವಿಗೆ ಸ್ಪಂದಿಸಿದ ಅವರು, ಹಾಲ್ಕುರಿಕೆ–ಹುಳಿಯಾರು ಮಾರ್ಗದ ಬಸ್‌ಗಳಲ್ಲಿ ಕನಿಷ್ಠ ಒಂದನ್ನು ಮಾಯಗೊಂಡನಹಳ್ಳಿಗೆ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಗಾಂಧೀನಗರದ ಆರ್‌ಸಿಸಿ ಟ್ಯಾಂಕ್ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅನೈರ್ಮಲ್ಯ ಉಂಟಾಗುತ್ತಿದೆ ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ಬಡಾವಣೆ ನಿವಾಸಿಗಳು ದೂರಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ, ತಹಸೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಹಾಗೂ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್ ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version