ತಿಪಟೂರು: ಅಪ್ಪು ಎನ್ನುವ ಹೆಸರು ಅದೆಷ್ಟೋ ಜೀವಗಳಿಗೆ ಸ್ಪೂರ್ತಿಯ ಚಿಲುಮೆಯಾಗಿ, ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ಕುಮಾರ್ ತಿಳಿಸಿದರು.
ನಗರದ ಕೆ.ಆರ್. ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಮತ್ತು ಅಪ್ಪು ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ರವರ 51ನೇ ಜನ್ಮದಿನದ ಅಂಗವಾಗಿ ಹಣ್ಣು ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ, ಅಪ್ಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಪುನೀತ್ ರವರು ಸರಳ ಪ್ರಭಾವದ ವ್ಯಕ್ತಿತ್ವ ಹೊಂದಿದ ಮಹಾನ್ ಸಾಧಕ. ಅವರು ಮಾಡಿದ ದಾನ-ಧರ್ಮ ಬದುಕಿದ್ದಾಗ ತಿಳಿಯಲಿಲ್ಲ. ಅವರ ನಿಧನದ ನಂತರ ರಾಜ್ಯ ಮತ್ತು ದೇಶಕ್ಕೆ ಗೊತ್ತಾಗಿ, ನಾವುಗಳು ಸಮಾಜ ಸೇವೆಯನ್ನು ಮಾಡಿದರೆ, ಅಪ್ಪುರವರ ರೀತಿ ಮಾಡಬೇಕೆಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಪಣ ತೊಟ್ಟು,ಇಂದು ಸಾಗುತ್ತಿದೆ ಎಂದು ತಿಳಿಸಿದರು.
ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಮೋಹನ್ ಮಾತನಾಡಿ, ಅಪ್ಪುರವರು ಮಾಡಿದ ಸಾಧನೆ, ಸಾಮಾಜಿಕ ಸೇವೆ ಇಂದಿಗೂ ನಮಗೆ ಆದರ್ಶವಾಗಿದೆ. ಅವರು ಉಳಿಸಿ ಹೋದ ಹೆಸರಿಗಾಗಿ ಮತ್ತು ಅವರ ಕನಸನ್ನು ಬೆಳೆಸುವುದಕ್ಕಾಗಿ ನಾವುಗಳು ಕೂಡ ಜನ್ಮದಿನ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಸಿದವರಿಗೆ ಅನ್ನದಾಸೋಹ, ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಅಪ್ಪು ಅಭಿಮಾನಿ ಬಳಗದ ಹರ್ಷವರ್ಧನ್, ಶ್ರೀಧರ್, ಹೇಮಂತ್, ಪತ್ರಕರ್ತ ಎ.ಆರ್. ನಂಜಪ್ಪ, ಆಟೋ ಚೌಡಪ್ಪ ಮತ್ತು ವೃದ್ಧಾಶ್ರಮದ ಉಮೇಶ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಹಿರಿಯ ನಾಗರೀಕರು ಹಾಗೂ ಅಭಿಮಾನಿಗಳು ಹಾಜರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ
