ತಿಪಟೂರು: ತಾಲ್ಲೂಕಿನಲ್ಲಿ ಅಡುಗೆ ಅನಿಲ (ಗ್ಯಾಸ್) ವಿತರಣೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಅಗತ್ಯವಿರುವಷ್ಟು ಗ್ಯಾಸ್ ಸಿಲಿಂಡರ್‌ಗಳು ದಾಸ್ತಾನು ಮಾಡಲಾಗಿದ್ದು, ಸರ್ಕಾರದ ನಿಯಮಾನುಸಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರ್ ತಿಳಿಸಿದ್ದಾರೆ.
ನಗರದ ಆಡಳಿತ ಸೌಧದ ಸಭಾಂಗಣದಲ್ಲಿ ಗ್ಯಾಸ್ ವಿತರಕರ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಿಪಟೂರು ತಾಲ್ಲೂಕಿನಲ್ಲಿ ಗ್ಯಾಸ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ,ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಒಂದು ಸಿಲಿಂಡರ್ ಹಾಗೂ ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಒಂದು ಸಿಲಿಂಡರ್ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಯಾರಾದರೂ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವುದು, ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾಗತಿಕ ಘಟನೆಗಳ ವರದಿಗಳನ್ನು ನೋಡಿ ಕೆಲವರು ಗ್ಯಾಸ್ ಸಿಗುವುದಿಲ್ಲ ಎಂಬ ಅನಗತ್ಯ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಆದರೆ ಸರ್ಕಾರದ ನಿಯಮಾನುಸಾರ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್‌ಗಳು ಲಭ್ಯವಾಗುತ್ತವೆ ಎಂದು ಸ್ಪಷ್ಟಪಡಿಸಿದರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡುತ್ತಿರುವ ಕಾರಣ ಕೆಲವೊಮ್ಮೆ ಸರ್ವರ್ ಸಮಸ್ಯೆ ಉಂಟಾಗಿದೆ. ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಯತೀಶ್, ಆಹಾರ ನಿರೀಕ್ಷಕ ರೇಣುಕ ಪ್ರಸಾದ್ ಸೇರಿದಂತೆ ಗ್ಯಾಸ್ ವಿತರಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ