ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ ನಾಗರೀಕರು.
ತಿಪಟೂರು, ಫೆಬ್ರವರಿ 12: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ಸಾರ್ವಜನಿಕ ವಲಯದ ಖಾಸಗೀಕರಣ ನೀತಿಗಳ ವಿರುದ್ಧ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಸ್ವಯಂ ಪ್ರೇರಿತ ಬಂದ್ ತಿಪಟೂರಿನಲ್ಲಿ ಭಾರೀ ಯಶಸ್ಸು ಕಂಡಿತು. ವಿವಿಧ ಕಾರ್ಮಿಕ, ರೈತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಸಾವಿರಾರು ರೈತರು ಮತ್ತು ಕಾರ್ಮಿಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ ಈ ಹೋರಾಟ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ತಿಪಟೂರು ನಗರ ಸಂಪೂರ್ಣ ಬಂದ್ ಆಗಿದ್ದು ಬ್ಯಾಂಕ್ಗಳು, ಎಲ್ಐಸಿ, ಪೋಸ್ಟ್ ಆಫೀಸ್ ಮತ್ತು ಕೆಇಬಿ ನೌಕರರು ಸಹ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಟೂಡಾ ರವರು ಹೋರಾಟದ ಹಿನ್ನೆಲೆಯನ್ನು ವಿವರಿಸಿ, ಕೇಂದ್ರ ಸರ್ಕಾರ ತರಲು ಯತ್ನಿಸುತ್ತಿರುವ ವಿಬಿ ರಾಮ್ ಜಿ ಮಸೂದೆ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಿದರು. ಮುಂದುವರೆದು ಕೇಂದ್ರ ಸರ್ಕಾರವು ಅಮೇರಿಕದೊಂದಿಗೆ ಮಾಡಿಕೊಳ್ಳಲು ಹೊರಟಿರುವ ಎಫ್ ಟಿ ಎ ದೇಶದ ರೈತರಿಗೆ ಅನಾನುಕೂಲವಾಗಿದ್ದು ಮುಂದಿನ ದಿನಗಳಲ್ಲಿ ರೈತರನ್ನುಸಂಕಟಕ್ಕೆ ದೂಡುವುದು. ಇದನ್ನು ಅರಿತು ರೈತರು ಎಚ್ಚೆತ್ತುಕೊಂಡು ಈ ನೀತಿಗಳ ವಿರುದ್ದ ಹೋರಾಟ ಸಂಘಟಿಸಬೇಕಿದೆ ಎಂದರು. ರೈತ, ಕಾರ್ಮಿಕ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಹೊರೆ ಹಾಕುವ ನೀತಿಗಳನ್ನು ವಿರೋಧಿಸುವ ಉದ್ದೇಶದಿಂದಲೇ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ಜನರ ಏಕತೆ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರು ಹೋರಾಟದ ಉದ್ದೇಶವನ್ನು ವಿವರಿಸಿ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕುಂದಿಸುತ್ತಿವೆ ಎಂದು ಹೇಳಿದರು. ವಿದ್ಯುತ್ ಕಾಯ್ದೆ 2025 ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಯತ್ನ ಜನ ವಿರೋಧಿ ಕ್ರಮವಾಗಿದ್ದು, ವಿದ್ಯುತ್ ವ್ಯವಸ್ಥೆ ಸರ್ಕಾರಿ ಒಡೆತನದಲ್ಲೇ ಇರಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಸಂಪತ್ತನ್ನು ಖಾಸಗಿ ಕೈಗಳಿಗೆ ಒಪ್ಪಿಸುವುದನ್ನು ಹೋರಾಟದ ಮೂಲಕ ತಡೆಯಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ ಅವರು ರೈತರ ಸಂಕಷ್ಟಗಳನ್ನು ಉಲ್ಲೇಖಿಸಿ, ತಾಲ್ಲುಕಿನಲ್ಲಿ ಬಗರ್ ಹುಕುಂ ರೈತರು ಸಾವಿರಾರು ಸಂಖ್ಯೆಯಲ್ಲಿದ್ದು ಅವರಿಗೆ ಮಂಜೂರು ಚೀಟಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರು ತಮ್ಮ ಜಮೀನುಗಳನ್ನು ದುರಸ್ತು ಹಾಗೂ ಪವತಿ ಖಾತೆ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಅಲೆಯುವಂತಹ ಸ್ಥಿತಿ ಇದ್ದು ಕೂಡಲೇ ಸ್ಥಳೀಯ ಆಡಳಿತ ಸಮಸ್ಯೆಗಳನ್ನು ಬಗೆಹರಿಸಬೇಕು, ತಪ್ಪಿದಲ್ಲಿ 20 ದಿನಗಳ ನಂತರ ತಾಲ್ಲೂಕು ಕಚೇರಿ ಎದುರು ರೈತರ ಅನಿರ್ಧಿಷ್ಟಾವದಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಅನುಸೂಯ ಅವರು ಹೋರಾಟದ ಸಂದರ್ಭದಲ್ಲಿ ಮಾತನಾಡಿ, ಅಂಗನವಾಡಿ ನೌಕರರು ಹಲವಾರು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದ್ದರೂ, ತಾಲೂಕು ಆಡಳಿತದಿಂದ ಅವರನ್ನು ದುರ್ಬಲಗೊಳಿಸುವ ಕ್ರಮಗಳು ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು. ತಮ್ಮ ಸೇವಾ ಭದ್ರತೆ ಮತ್ತು ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಅಂಗನವಾಡಿ ನೌಕರರು ಹೋರಾಟದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ತಿಮ್ಲಾಪುರ ದೇವರಾಜು ಅವರು ಹೋರಾಟದ ರೈತಪರ ಅಂಶಗಳನ್ನು ವಿವರಿಸಿ, ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ, ಸಾಲ ಮನ್ನಾ ಹಾಗೂ ವಿದ್ಯುತ್ ಮೀಟರೀಕರಣ ಮಾಡಲು ಸರ್ಕಾರಗಳು ಹೊರಟಿದ್ದು ಇದನ್ನು ಖಂಡಿಸಿ ಇನ್ನೂ ಹೆಚ್ಚು ಹೆಚ್ಚು ಹೋರಾಟಗಳನ್ನು ಮಾಢುವ ಮೂಲಕ ಖಂಡಿಸಬೇಕಿದೆ ಎಂದರು.
ಸೌಹಾರ್ದ ತಿಪಟೂರಿನ ಕಾರ್ಯದರ್ಶಿ ಅಲ್ಲಾಬಕಾಶ್ ಅವರು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಸಂಘಟನೆಗಳು ಒಂದಾಗಿ ಹೋರಾಟ ನಡೆಸುತ್ತಿದ್ದು ಇದು ಜನರ ಏಕತೆಯ ಪ್ರತೀಕವಾಗಿದೆ. ಇಂದುನಡೆದ ತಿಪಟೂರು ಬಂದ್ ನ ಯಶಸ್ಸು ಗಮನಿಸಿದಾಗ ಜನರಲ್ಲಿ ಸರ್ಕಾಋಗಳ ವಿರುದ್ದ ಇರುವ ಆಕ್ರೋಶ ಕಾಡುತ್ತಿದೆ ಎಂದರು.
ತಾಲೂಕ ಕಾರ್ಯದರ್ಶಿ ಶೈಲಾ ಅವರು ಮಹಿಳಾ ಕಾರ್ಮಿಕರ ಹಕ್ಕುಗಳ ರಕ್ಷಣೆಯೇ ಈ ಹೋರಾಟದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಹಮಾಲಿ ಕಾರ್ಮಿಕರ ಸಂಘದ ಮುಖಂಡ ಲಕ್ಷ್ಮಿಕಾಂತ್ ಅವರು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ ಸೌಲಭ್ಯ ಮತ್ತು ಪಿಂಚಣಿ ಕುರಿತ ಬೇಡಿಕೆಗಳನ್ನು ಸರ್ಕಾಋ ಕೂಡಲೇ ಈಡೇರಿಸಿ ಹಮಾಲಿ ಕಾರ್ಮಿಕರ ಹಿತ ಕಾಪಾಡಬೇಕೆಂದು ತಿಳಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಜಯಾನಂದಯ್ಯ ಅವರು ರೈತ-ಕಾರ್ಮಿಕರ ಐಕ್ಯತೆ ಬಲವಾಗಿರುವುದನ್ನು ಈ ಮುಷ್ಕರ ತೋರಿಸಿದೆ ಎಂದು ತಿಳಿಸಿದರು.
ಈ ಹೋರಾಟದಲ್ಲಿ ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಭೈರಪ್ಪ, ಕುಮಾರಯ್ಯ, ಅಂಗನವಾಡಿ ನೌಕರರ ಸಂಘದ ಶಿವಮ್ಮ ಮತ್ತು ಮಮತಾ, ಅಕ್ಷರ ದಾಸೋಹ ಸಂಘಟನೆಯ ಅನುಸೂಯ, ಸೌಹಾರ್ದ ತಿಪಟೂರು ಸಂಘಟನೆಯ ತಾಸಿನ್ (ಮೈಸೂರು), ನದೀಮ್ ಟೈಯರ್, ಶಫಿವುಲ್ಲಾ ಶರೀಫ್, ಸಮಿವುಲ್ಲಾ, ಲೋಕೇಶ್, ಶಾರುಕ್, ರಫಿ, ಸೈಯದ್ ಸಫಿ, ಸಾಬಿರ್, ಹಮಾಲಿ ಕಾರ್ಮಿಕರ ಸಂಘಟನೆಯ ಜಯರಾಮ್ ಮತ್ತು ಪ್ರಕಾಶ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ