ತಿಪಟೂರು, ಫೆ. 11: ನಗರದ ಎಪಿಎಂಸಿ ಆವರಣದಲ್ಲಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಅಡಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದರು.

ಚಾಲನೆ ನೀಡಿ ಮಾತನಾಡಿದ ಅವರು, ರಾಗಿ ಬೆಳೆಗಾರರ ಸಂಕಷ್ಟವನ್ನು ಮನಗಂಡು ನಾನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಮಾಜಿ ಕೃಷಿ ಸಚಿವ ಟಿ.ಬಿ. ಜಯಚಂದ್ರ ಅವರೊಂದಿಗೆ ಚರ್ಚಿಸಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಾರಂಭಿಸಲು ಕ್ರಮ ಕೈಗೊಂಡಿದ್ದೆ. ಪ್ರಸ್ತುತ ರೈತರಿಗೆ ಉತ್ತಮ ಬೆಲೆ ಲಭ್ಯವಾಗುತ್ತಿದೆ ಎಂದು ಹೇಳಿದರು. ಪ್ರತಿ ಕ್ವಿಂಟಲ್‌ಗೆ ₹5,830ರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದ್ದು, ಫಲಾನುಭವಿ ರೈತರು ಸ್ವತಃ ಖರೀದಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ (ಬೆರಳಚ್ಚು) ನೀಡುವ ಮೂಲಕ ರಾಗಿ ಮಾರಾಟ ಮಾಡಬೇಕು. ಸರ್ಕಾರ ಪ್ರತಿ ಚೀಲಕ್ಕೆ 50 ಕೆ.ಜಿ. 600 ಗ್ರಾಂ ತೂಕ ನಿಗದಿಪಡಿಸಿದ್ದು, ಯಾವುದೇ ಕಾರಣಕ್ಕೂ ಹೆಚ್ಚುವರಿ ರಾಗಿ ನೀಡಬಾರದು ಎಂದು ಸೂಚಿಸಿದರು.
ನೋಂದಣಿ ಆಧಾರದ ಮೇಲೆ ಜೇಷ್ಠತಾ ಪಟ್ಟಿ ತಯಾರಿಸಿ ಮಾರುಕಟ್ಟೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ರೈತರು ತಮ್ಮಿಗೆ ನಿಗದಿಪಡಿಸಿದ ದಿನಾಂಕದಂದು ಮಾತ್ರ ರಾಗಿ ಮಾರಾಟ ಮಾಡಬೇಕು. ಮಾರಾಟ ಮಾಡಿದ ರೈತರಿಗೆ ನಿಗದಿತ ಅವಧಿಯೊಳಗೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಖರೀದಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲ್ಲೂಕಿನಲ್ಲಿ ಖರೀದಿಯಾದ ರಾಗಿಯನ್ನು ಸ್ಥಳೀಯ ಪಡಿತರ ವಿತರಣಾ ವ್ಯವಸ್ಥೆಯ ಮೂಲಕವೇ ವಿತರಿಸಲಾಗುತ್ತದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ರಾಗಿ ಶುದ್ಧವಾಗಿರುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ತನ್ವೀರ್ ಅಲಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನಡೆಯುತ್ತಿದೆ. ಸುಮಾರು 10,400 ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಅಗತ್ಯ ಗೋಣಿಚೀಲಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ರೈತರು ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ರಾಗಿ ತಂದು ಮಾರಾಟ ಮಾಡಬೇಕು. ಜೇಷ್ಠತಾ ಆಧಾರದ ಮೇಲೆ ಮಾತ್ರ ಖರೀದಿ ನಡೆಯಲಿದೆ. ನಿಗದಿತ ದಿನಾಂಕಕ್ಕಿಂತ ಮೊದಲು ಖರೀದಿ ಕೇಂದ್ರದ ಮುಂದೆ ರಾಗಿ ತರುವುದನ್ನು ತಪ್ಪಿಸಬೇಕು. ಮಾರಾಟದ ವೇಳೆ ಬಯೋಮೆಟ್ರಿಕ್ ನೀಡಿ ರಶೀದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ಖರೀದಿ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನೋಂದಣಿ ಮಾಡಿಕೊಂಡಿರುವ ಎಲ್ಲಾ ರೈತರ ರಾಗಿಯನ್ನು ಖರೀದಿ ಮಾಡಲಾಗುವುದು. ಯಾವುದೇ ರೈತರನ್ನು ನಿರ್ಲಕ್ಷಿಸುವುದಿಲ್ಲ. ರೈತರು ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಕೃಷಿ ಸಮಾಜದ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷ ಮೋಹನ್ ಕುಮಾರ್ (ಕಲ್ಲೇಗೌಡನಪಾಳ್ಯ), ಮುಖಂಡ ಯೋಗಾನಂದಮೂರ್ತಿ, ಎಪಿಎಂಸಿ ಕಾರ್ಯದರ್ಶಿ ನ್ಯಾಮೇಗೌಡ, ಆಹಾರ ನಿರೀಕ್ಷಕ ರೇಣುಕಪ್ರಸಾದ್, ಆಹಾರ ಇಲಾಖೆ ಶಿರಸ್ತೇದಾರ್ ಕಿರಣ್, ರಾಗಿ ಖರೀದಿ ಅಧಿಕಾರಿ ರುದ್ರಪ್ಪ, ದಕ್ಷಿಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ