ತಿಪಟೂರು ಉದಯರವಿ ಸೌಹಾರ್ದ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಫೆಬ್ರವರಿ 01 ರಂದು ಅದ್ದೂರಿಯಾಗಿ ಜರುಗಲಿದೆ.
ತಿಪಟೂರು: ಜಿಲ್ಲೆಯಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿ, ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ನಮ್ಮ ಸಹಕಾರಿ ನಿಯಮಿತ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿ,ರಜತ ಮಹೋತ್ಸವ ಆಚರಿಸುತ್ತಿದ್ದು ಸಂಘದ ಬೆಳವಣಿಗೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಚಿರಋಣಿಯಾಗಿರುತ್ತೇವೆ ಎಂದು ಶ್ರೀ ಉದಯರವಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಕೆ.ಎಂ.ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಕೆ.ಆರ್. ಬಡಾವಣೆಯಲ್ಲಿರುವ ಶ್ರೀ ಉದಯರವಿ ಭವನದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಉದಯರವಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 25ನೇ ವರ್ಷದ ರಜತ ಮಹೋತ್ಸವ-2025 ನಿಮಿತ್ತ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ:01/02/2026 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ, ನಗರದ ಕಂಚಾಘಟ್ಟ ರಸ್ತೆಯಲ್ಲಿರುವ, ಪವರ್ ಸ್ಟೇಷನ್ ಹಿಂಭಾಗ, ಜಿ.ಕೆ.ಬಾಬು ಲೇಔಟ್ ನ ಆವರಣದ ಉದಯರವಿ ಮಂಟಪದಲ್ಲಿ ರಜತ ಮಹೋತ್ಸವ ಹಮ್ಮಿಕೊಂಡಿದ್ದು, 5/3/2000 ನೇ ವರ್ಷದಲ್ಲಿ, ರಾಜ್ಯ ಸಹಕಾರಿ ಕಾಯ್ದೆ 1959ರ ಅಡಿಯಲ್ಲಿ 156 ಸದಸ್ಯರು ಹಾಗೂ ಎರಡು ಲಕ್ಷ ಬಂಡವಾಳದೊಂದಿಗೆ, ಸಂಸ್ಥಾಪಕರಾದ ಎಂ.ಎಸ್. ಸೋಮಶೇಖರ್ ಸಂಘ ಸ್ಥಾಪಿಸಿ, 2004ರಲ್ಲಿ ಸೌಹಾರ್ದ ನಿಯಮಿತವಾಗಿ ಪ್ರತಿ ವರ್ಷ ಆರ್ಥಿಕ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿಕೊಂಡು ಇಂದಿಗೂ ಬರುತ್ತಿದೆ. 2007ರಲ್ಲಿ ಕೆ.ಆರ್. ಬಡಾವಣೆಯಲ್ಲಿ ಸಹಕಾರಿಯ ಸ್ವಂತ ಕಟ್ಟಡವನ್ನು ಪಡೆದುಕೊಂಡು, 2013ರಲ್ಲಿ ಉತ್ತಮ ಸೌಹಾರ್ದ ಸಹಕಾರಿ ಸಂಸ್ಥೆ ಎಂದು ಪ್ರಶಸ್ತಿ ಪಡೆದು, 2014ರಲ್ಲಿ ಪಕ್ಕದ ತಾಲೂಕು ಅರಸೀಕೆರೆಯಲ್ಲಿ ಮೊದಲನೇ ಶಾಖೆ ಪ್ರಾರಂಭಿಸಿ, 2018-19ರ ಸಾಲಿನಲ್ಲಿ 3222 ಶೇರುದಾರರನ್ನು ಹೊಂದಿ, 145 ಕೋಟಿ ಬಂಡವಾಳ ಹೊಂದಿದ್ದು, ಶೇಕಡ 15 ಪರ್ಸೆಂಟ್ ಡಿವಿಡೆಂಟ್ ನೀಡಲಾಗಿರುತ್ತದೆ. ಎರಡನೇ ಶಾಖೆಯನ್ನು 2022ರಲ್ಲಿ ತುರುವೇಕೆರೆ ಪಟ್ಟಣದಲ್ಲಿ ಪ್ರಾರಂಭಿಸಿ, ಬೆಳ್ಳಿ ಹಬ್ಬದ ನೆನಪಿಗಾಗಿ ತಿಪಟೂರಿನಲ್ಲಿ ಸುಮಾರು 4 ಅಂತಸ್ತಿನ ಆಡಳಿತ ಕಟ್ಟಡ ನಿರ್ಮಾಣವು ಮುಕ್ತಾಯ ಹಂತದಲ್ಲಿ ಬಂದಿರುತ್ತದೆ. ನಿಯಮಿತದ ಶೇರುದಾರರು, ಸದಸ್ಯರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಪಾಲ್ಗೊಂಡು, ಸುಗಮ ಸಂಗೀತ ಕಾರ್ಯಕ್ರಮ ಮತ್ತು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕೆಂದು ಹಾಗೂ ಶಾಸಕ ಕೆ.ಷಡಕ್ಷರಿ ಮತ್ತು ಮಾಜಿ ಸಚಿವ ನಾಗೇಶ್ ಸೇರಿದಂತೆ ಮುಖಂಡರುಗಳು, ವಿವಿಧ ಸಹಕಾರಿಯ ಮುಖಂಡರುಗಳು ಅಧ್ಯಕ್ಷರುಗಳು ಹಾಗೂ ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಿಯಮಿತದ ಸಂಸ್ಥಾಪಕ ಎಂ.ಎಸ್. ಸೋಮಶೇಖರ್ ಮಾತನಾಡಿ, ಆರ್ಥಿಕ ಶಿಸ್ತು, ಪಾರದರ್ಶಕ, ಸಮಾಜಮುಖಿ ಆಡಳಿತದಿಂದ ಪ್ರತಿ ವರ್ಷವೂ ಆರ್ಥಿಕ ಅಭಿವೃದ್ಧಿ ಹೊಂದುತ್ತ, ಬೆಂಗಳೂರು ವಿಭಾಗೀಯ ದಕ್ಷಿಣದಲ್ಲಿ ಎರಡನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ನಮ್ಮ ಸಹಕಾರಿಯು ಹೊಂದಿದ್ದು, ಇಂದಿನ ಷೇರುದಾರರ ಸಂಖ್ಯೆ 6621, ಒಟ್ಟು ಶೇರು ಬಂಡವಾಳ 7.45 ಕೋಟಿ, ದುಡಿಯುವ ಬಂಡವಾಳ 432 ಕೋಟಿ, ಠೇವಣಿಗಳು 401ಕೋಟಿ, ಸ್ವಂತ ಬಂಡವಾಳ 30 ಕೋಟಿ, ಸಾಲ 300 ಕೋಟಿ, ಹೂಡಿಕೆಗಳು 108 ಕೋಟಿ, ಸ್ಥಿರ ಆಸ್ತಿ 4.6 ಕೋಟಿ, ಚರ ಆಸ್ತಿ 71 ಲಕ್ಷ ಮತ್ತು ನಿವಳ ಲಾಭ (ತಾತ್ಕಾಲಿಕ) 4.35 ಕೋಟಿ ಹೊಂದಿರುತ್ತದೆ. ರಿಸರ್ವ್ ಬ್ಯಾಂಕ್ ನೂತನ ಸ್ಥಾಪನೆಗೆ ಪ್ರಸ್ತಾವನೆಗೆ ಇಟ್ಟಿದ್ದು, ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಾಯ ಧನ ನೀಡುತ್ತಾ ಬರುತ್ತಿದ್ದು, ಸದಸ್ಯರುಗಳು ಅಕಾಲಿಕ ಮರಣ ಹೊಂದಿದರೆ ಪರಿಹಾರ ನಿಧಿ ನೀಡುತ್ತಿದ್ದೇವೆ ಹಾಗೂ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನೊಂದಾಯಿತ ಸದಸ್ಯರಿಗೆ ಗಿಫ್ಟ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಯಮಿತದ ಉಪಾಧ್ಯಕ್ಷ ಹೆಚ್. ಸೋಮಶೇಖರಯ್ಯ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಸಿ. ರವಿ, ನಿರ್ದೇಶಕರುಗಳಾದ ಅಣ್ಣಪ್ಪ, ಉಮಾಪತಿ, ಕುಮಾರಸ್ವಾಮಿ, ಜಯದೇವಮೂರ್ತಿ, ತ್ರಿಲೋಚನ, ದಯಾನಂದ, ನಾಗಲಾಂಬಿಕ, ಬೋರಯ್ಯ, ಮಾರುತಿ, ಲಿಂಗರಾಜು, ಸಿದ್ದನಂಜಪ್ಪ, ಸಿದ್ದೇಶ್, ಸುಮಿತ್ರ ಮತ್ತು ರವಿಚಂದ್ರ ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ