ಕೆ.ಬಿ ಕ್ರಾಸ್ ನಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲಿ ಗುರುಕುಲಾಂದಾಶ್ರಮದ ಶ್ರೀಗಳ ಅಭಿಮತ.
ತಿಪಟೂರು, :ಹಿಂದೂಧರ್ಮದ ಒಳಗಿನ ದೋಷಗಳನ್ನು ಸರಿಪಡಿಸಿಕೊಂಡು ಸಮಸ್ತ ಹಿಂದೂ ಸಮಾಜ ಒಗ್ಗೂಡಿದಾಗ ಮಾತ್ರ ಮತಾಂತರದ ಪಿಡುಗನ್ನು ದೂರಮಾಡಲು ಸಾಧ್ಯ ಎಂದು ತಿಪಟೂರು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದರು.

ತಾಲ್ಲೂಕಿನ ಕೆ.ಬಿ. ಕ್ರಾಸ್ ಸಮೀಪ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದೂ ಸಂಸ್ಕೃತಿ ಎಲ್ಲರನ್ನೂ ಗೌರವದಿಂದ ಕಾಣುವ ಸಂಸ್ಕಾರವನ್ನು ಕಲಿಸಿದೆ. ಹಿಂದೂಗಳಲ್ಲಿ ಮತಾಂತರ ಮಾಡುವ ಪ್ರವೃತ್ತಿಯಿಲ್ಲ. ಆದರೆ ದೇಶದಲ್ಲಿ ಕೆಲ ಶಕ್ತಿಗಳು ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಂದೂ ಸಮಾಜದಲ್ಲಿರುವ ಅಸಮಾನತೆಗಳನ್ನು ದೂರಮಾಡಬೇಕು. ದಲಿತರನ್ನು ಸಮಾನವಾಗಿ ಕಾಣಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು. ಹಿಂದೂಗಳು ಸಂಘಟಿತರಾದಾಗ ಮಾತ್ರ ತಮ್ಮ ರಕ್ಷಣೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಘಟನೆಗೆ ನೀಡಲಾಗುತ್ತಿರುವ ಆದ್ಯತೆ ಸ್ವಾಗತಾರ್ಹ ಬೆಳವಣಿಗೆ ಎಂದು ತಿಳಿಸಿದರು.
ಬಾಂಗ್ಲಾದೇಶ ಸೇರಿದಂತೆ ಹಲವೆಡೆ ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ ಹತ್ಯಾಚಾರ ನಡೆಯುತ್ತಿರುವುದು ಕಳವಳಕಾರಿ. ಇವು ಅಂತ್ಯವಾಗಬೇಕಿದೆ ಎಂದು ಹೇಳಿದರು. ಹಿಂದೂಧರ್ಮದಲ್ಲಿ ಈಶ್ವರವಾದ ಹಾಗೂ ನಿರೀಶ್ವರವಾದ ಎರಡಕ್ಕೂ ಅವಕಾಶವಿದ್ದು, ಅನೇಕ ಋಷಿ–ಮುನಿಗಳು ಹಾಗೂ ಮಹಾತ್ಮರ ಚಿಂತನೆಗಳಿಂದ ಬೆಳೆದು ಬಂದ ಪರಂಪರೆಯಾಗಿದೆ. ಜಗತ್ತಿನ ಅನೇಕ ದೇಶಗಳು ಇಂದು ನಮ್ಮ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿವೆ ಎಂದರು.
ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆ ವಹಿಸಿದ್ದ ಗೋಡೆಕೆರೆ ಮಠದ ಶ್ರೀಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಹಿಂದೂಧರ್ಮದಲ್ಲಿ ಜಗತ್ತಿಗೆ ದಾರಿ ತೋರಿಸುವ ವಿಚಾರಧಾರೆಗಳಿವೆ. ಸ್ವಾಮಿ ವಿವೇಕಾನಂದರು ಪರಕೀಯರ ಆಳ್ವಿಕೆಯ ವಿರುದ್ಧ ಧರ್ಮ ಹಾಗೂ ಸಮಾಜಕ್ಕೆ ಆತ್ಮಸ್ಥೈರ್ಯ ತುಂಬಿದರು. ಡಾ. ಹೆಡಗೇವಾರ್ ಅವರು ಭಾರತ ಮಾತೆಯೇ ನಮ್ಮ ದೇವರು ಎಂಬ ಭಾವನೆಯ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಕೈಗೊಂಡರು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ ವರ್ಗಗಳಲ್ಲಿ ಮತಾಂತರ ಹೆಚ್ಚಾಗುತ್ತಿದ್ದು, ಮಠಮಾನ್ಯರು ಹಾಗೂ ಗುರುಪರಂಪರೆಯ ಮಾರ್ಗದರ್ಶನದಲ್ಲಿ ನಡೆದರೆ ಮತಾಂತರ ತಡೆಯಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಭಾಷಣಕಾರ ಯಾದವ ಕೃಷ್ಣ ಮಾತನಾಡಿ, ಜಗತ್ತಿನ ಅಶಾಂತಿಯ ವಾತಾವರಣಕ್ಕೆ ಹಿಂದೂಧರ್ಮ ಶಾಂತಿಯ ಬೆಳಕಾಗಬಲ್ಲದು. ಇತರೆ ಧರ್ಮಗಳು ಹುಟ್ಟುವ ಮೊದಲೇ ಹಿಂದೂಧರ್ಮ ಅಸ್ತಿತ್ವದಲ್ಲಿತ್ತು. ಇಂದು ಇಡೀ ವಿಶ್ವ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯತ್ತ ಗಮನ ಹರಿಸುತ್ತಿದೆ. ಹಿಂದೂ ಸಮಾಜ ಒಗ್ಗೂಡಿದರೆ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಹೇಮಂತ್ ಕುಮಾರ್ ಕೊಪ್ಪ, ಪ್ರತಾಪ್ ಸಿಂಗ್, ಆಯರಹಳ್ಳಿ ಶಂಕರಪ್ಪ, ಬಿಜೆಪಿ ಮಾಜಿ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ವಿಶ್ವದೀಪ್, ಗಂಗರಾಜು, ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಶಶಿಕಿರಣ್, ಬಿಸ್ಲೇಹಳ್ಳಿ ಜಗದೀಶ್, ಗುರುಗದಹಳ್ಳಿ ವಿಶ್ವನಾಥ್, ಪುಟ್ಟಸ್ವಾಮಿ, ಬಿಳಿಗೆರೆ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂ ಸಮಾಜೋತ್ಸವದ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆಯಿತು. ಬಸವನ ಮೆರವಣಿಗೆ, ಕರಡೇವು ವಾದ್ಯ, ನಂದಿಧ್ವಜ ಕುಣಿತ, ಚಿಟ್ಟೆಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. “ಭಾರತ್ ಮಾತಾಕಿ ಜೈ” ಜಯಘೋಷಣೆಗಳು ಮುಗಿಲು ಮುಟ್ಟಿದವು. ನೂರಾರು ಹಿಂದೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ