ತಿಪಟೂರು:ತಾಲ್ಲೋಕಿನ ಪ್ರಸಿದ್ದ ಯಾತ್ರಾಕ್ಷೇತ್ರ ಕಲ್ಪತರು ನಾಡಿನ ಶಕ್ತಿ ಪೀಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಯಿತು.
ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಶಿಪೂಜೆ ನೆರವೇರಿಸಲಾಯಿತು.ಗ್ರಾಮದ ರಾಸುಗಳಿಗೆ ಪೂಜೆಸಲ್ಲಿಸಿ ಸಾಂಪ್ರದಾಯಿಕವಾಗಿ ಕಿಚ್ಚುಹಾಯಿಸಲಾಯಿತು.ಸಂಕ್ರಾಂತಿ ಅಂಗವಾಗಿ ಶ್ರೀಸೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು.

ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ. ರಾಗ, ದ್ವೇಷಗಳನ್ನು ಮರೆತು ಪರಸ್ಪರರ ಜೊತೆ ಪ್ರೀತಿ, ವಿಶ್ವಾಸದಿಂದ ಬೆರೆಯುತ್ತಾ ಜೀವನ ನಡೆಸಿದಾಗ ಮಾತ್ರ ಮಾನಸಿಕ ಹಾಗೂ ಆತ್ಮತೃಪ್ತಿಯು ದೊರಕುತ್ತದೆ .
.
ಮಾನವ ತನ್ನ ಜೀವನದಲ್ಲಿ ಹಣ, ಐಶ್ವರ್ಯದ ಸಂಪಾದನೆಗಾಗಿ ಹೆಚ್ಚು ಶ್ರಮಿಸುತ್ತಾನೆ. ಮಾನವೀಯ ಮೌಲ್ಯಗಳನ್ನು ಮರೆತು ತನ್ನ ಸುಖವೇ ಪರಮಸುಖವೆಂದು ಭಾವಿಸುತ್ತಾ ಪರಮಾತ್ಮನನ್ನು ಕಾಣುವ ಗೋಜಿಗೆ ಹೋಗದೇ ಸ್ವಾರ್ಥದಿಂದ ತನ್ನಪಾಡಿಗೆ ತಾನಿರುತ್ತಾನೆ. ಜೀವನದಲ್ಲಿ ಅಂತರಂಗದಲ್ಲಿರುವ ಪರಮಾತ್ಮನನ್ನು ಹುಡುಕದೇ ಎಲ್ಲೆಲ್ಲಿಗೋ ಹೋಗುತ್ತೇವೆ. ಆದರೆ ಪರಮಾತ್ಮ ನಮ್ಮಲ್ಲಿಯೇ ನೆಲೆಸಿರುತ್ತಾನೆ ಎಂಬುದು ತಿಳಿದೇ ಇರುವುದಿಲ್ಲ. ಮಾನವನ ಮನಸ್ಸಿನಲ್ಲಿ ಎಲ್ಲಾರೀತಿಯ ವಿಚಾರಗಳು ನೆಲೆಸಿದ್ದು ಉತ್ತಮ ವಿಚಾರಗಳನ್ನು ಉಳಿಸಿ ಕೆಟ್ಟ ವಿಚಾರಗಳನ್ನು ದೇವಾಲಯ, ಮಠಗಳಿಗೆ ಬಂದಂತಹ ಸಂದರ್ಭದಲ್ಲಿ ಬಿಟ್ಟು ಹೋಗಬೇಕು. ಪರಮಾತ್ಮನು ಎಲ್ಲರಿಗೂ ಒಂದೇ ರೀತಿಯಲ್ಲಿ ಅಥೈಸಿಕೊಳ್ಳಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿಯೂ ಮೂರ್ತಿ ಪೂಜೆ ಆಚರಣೆಯಲ್ಲಿದೆ ಎಂದರೆ ಆ ಮೂರ್ತಿಯಲ್ಲಿನ ಶಕ್ತಿ ದೈವತ್ತವ ಇದೇ ಎನ್ನುವುದನ್ನು ತಿಳಿಯುವ ಅವಶ್ಯಕವಿದೆ. ಧರ್ಮ ಎಂದರೆ ಎಲ್ಲಾ ಮತಗಳು ಇಲ್ಲಿ ನೆಲೆಸಿರುತ್ತವೆ. ಮಾನವನು ಇದರ ಒಳ ಅರ್ಥವನ್ನು ತಿಳಿದು ನಡೆಯಬೇಕು ಎಂದರು.
ಕಿಚ್ಚು ಹಾಯಿಸುವಿಕೆ:
ಗ್ರಾಮಸ್ಥೆರೆಲ್ಲಾ ಮಠದ ಆವರಣದಲ್ಲಿ ಸೇರಿ ತಮ್ಮ ರಾಸುಗಳನ್ನು ಸಿಂಗಾರ ಮಾಡಿ ಕಿಚ್ಚು ಹಾಯಿಸುವಿಕೆಗೆ ಸಿದ್ಧರಾದಾಗ ಭತ್ತದ ಒಣ ಹುಲ್ಲನ್ನು ಹಾಕಿ ಪೂಜೆ ಸಲ್ಲಿಸಿದ ಶ್ರೀಗಳು ಕಿಚ್ಚು ಹಚ್ಚಿಸಿದ ತಕ್ಷಣವೇ ಸಿಂಗರಿಸಿದ ರಾಸುಗಳು ಕಿಚ್ಚಿನಲ್ಲಿ ಹಾಯ್ದು ಓಡಿದವು. ದಣಿದು ಬಂದಂತಹ ದನಗಳಿಗೆ ಎಡೆ ಮಾಡಿ ಹಬ್ಬದ ಊಟವನ್ನು ಎಡೆಯ ರೂಪದಲ್ಲಿ ನೀಡಿದರು. ಗ್ರಾಮ ದೇವತೆಯಾದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯವನ್ನು ಮೂರು ಸುತ್ತು ಸುತ್ತಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತವೆ. ಕಾರ್ತಿಕ ಮಾಸದಲ್ಲಿ ಚೆನ್ನಾಗಿ ಮೇಯ್ದು ಮೈತುಂಬಿಕೊಂಡ ದನಗಳಿಗೆ “ ಕಣ್ಣೆಸರಾಗಬಾರದೆಂದು” ಕಿಚ್ಚು ಹಾಯಿಸುತ್ತಾರೆ. ಅಲ್ಲದೇ ದನಕರುಗಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಬಾರದಿರಲೆಂಬ ಉದ್ದೇಶದಿಂದ ಕಿಚ್ಚು ಹಾಕಲಾದ ಸ್ಥಳದ ಬೂದಿಯನ್ನು ಹೊಯ್ದು ಜಾನವಾರುಗಳಿಗೆ ಸವರುತ್ತಾರೆ. ಮನೆ ಮಂದಿಯೆಲ್ಲ ಬೂದಿಯನ್ನು ವಿಭೂತಿಯಾಗಿ ಬಳಸುತ್ತಾರೆ.
ಈ ಸಂದರ್ಭದಲ್ಲಿ ಮಠದ ಆಚರಣದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ಗ್ರಾಮಸ್ಥರು ಸೇರಿದ್ದು ಸಡಗರವನ್ನು ತುಂಬಿಕೊಳ್ಳುವ ಜೊತೆಗೆ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ತದ ನಂತರದಲ್ಲಿ ಎಲ್ಲರಿಗೂ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಎಳ್ಳು ಬೆಲ್ಲ, ಪೊಂಗಲ್ ನೀಡಿ ಆಶೀರ್ವದಿಸಿದರು.
ಸಂದರ್ಭದಲ್ಲಿ ಹಾಸನದ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ,
ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸ್ವಾಮೀಜಿ, ದೇವಾಲಯದ ಗುಡಿಗೌಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ