KALPATHARU KRANTHI

ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ: ತಿಪಟೂರು ಜಿಲ್ಲಾಕೇಂದ್ರ ಮಾಡಿಯೇ ಸಿದ್ದ : ಶಾಸಕ ಕೆ.ಷಡಕ್ಷರಿ.

Spread the love

ತಿಪಟೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಿಪಟೂರು ಜಿಲ್ಲಾಕೇಂದ್ರ ಮಾಡುವುದು ನನ್ನ ಮೊದಲ ಆದ್ಯತೆ. ತುಮಕೂರು ಜಿಲ್ಲೆಯನ್ನು ಎರಡು ಮಾಡಿದರೂ ಮೂರು ಮಾಡಿದರೂ ಪರವಾಗಿಲ್ಲ, ತಿಪಟೂರು ಜಿಲ್ಲೆ ಆಗಲೇಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.


ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ವಿರಾಸತ್ ನುಡಿಸಿರಿ–ತಿಪಟೂರು ಹಾಗೂ ಕಲಾಕೃತಿ ತಿಪಟೂರು ಸಹಯೋಗದಲ್ಲಿ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಪತರು ನಾಡು ಕಲೆ–ಸಾಹಿತ್ಯ–ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಾ, ಆರ್ಥಿಕ ಕೇಂದ್ರವಾಗಿಯೂ ಬೆಳೆಯುತ್ತಿದೆ ಎಂದರು. ಜಿಲ್ಲಾಕೇಂದ್ರಕ್ಕೆ ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳು ತಿಪಟೂರಿನಲ್ಲಿ ಲಭ್ಯವಿದ್ದು, ಜಿಲ್ಲಾಕೇಂದ್ರ ಘೋಷಣೆಗೆ ಇದು ಸಂಪೂರ್ಣ ಅರ್ಹ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಮಾತನಾಡಿ, ಹಲವಾರು ಭಾಷೆ, ಕಲೆ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನೊಳಗೊಂಡ ಭಾರತವನ್ನು ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಒಂದಾಗಿಸುವುದು ಮುಖ್ಯ ಎಂದರು. ಸಂಸ್ಥೆಯ ಪ್ರಚಾರಕ್ಕಾಗಿ ಅಲ್ಲ, ದೇಶದ ವಿವಿಧ ಕಲೆ–ಸಂಸ್ಕೃತಿಗಳ ಮೂಲಕ ದೇಶ ಕಟ್ಟುವ ಉದ್ದೇಶದಿಂದ ಆಳ್ವಾಸ್ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದೆ ಎಂದರು. ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು ಆಗಿದ್ದು, ಅವರ ಮೂಲಕವೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.


ಶ್ರೀ ಕೆರೆಗೋಡಿ ರಂಗಾಪುರ ಭೂಸಕ್ಷೇತ್ರಾಧ್ಯಕ್ಷರಾದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಕಲ್ಪತರು ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾದಾನದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರದ ಉಳಿವಿಗೆ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.


ಆಳ್ವಾಸ್ ವಿರಾಸತ್ ನುಡಿಸಿರಿ ತಿಪಟೂರು ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಬಿ.ಎಸ್. ಅರುಣ್ ಕುಮಾರ್ ಮಾತನಾಡಿ, ತಿಪಟೂರು ಕಲೆ–ಸಾಹಿತ್ಯ–ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಮತ್ತು ಸಂಸ್ಕೃತಿಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರವು ಅವರ ಸೇವೆಯನ್ನು ಗುರುತಿಸಿ ಸಾಂಸ್ಕೃತಿಕ ರಾಯಭಾರಿ ಗೌರವ ಹಾಗೂ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಶ್ರೀಧರ್, ಡಾ. ವಿವೇಚನ್, ಉದ್ಯಮಿ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version