ತುರುವೇಕೆರೆ: ಮಕ್ಕಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಾಗ ಅವರು ಉನ್ನತ ವ್ಯಕ್ತಿಯಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ನಾವು ಸುದ್ದಿ ಮಾಧ್ಯಮಗಳಲ್ಲಿ ಮಕ್ಕಳ ಸಾಧನೆ ನೋಡಿದರೆ ಸಾಲದು ನಮ್ಮ ಮಕ್ಕಳು ಅವರಂತಾಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿ ಸಂಪಿಗೆ ಗೌರಮ್ಮ ರುದ್ರಯ ಮಕ್ಕಳ ಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ “ಸಂಪಿಗೆ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್” ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಷಣವಹಿಸಿ ಮಾಜಿ ಇಸ್ರೋ ಅಧ್ಯಕ್ಷರಾದ ಶ್ರೀ ಎ.ಎಸ್. ಕಿರಣ್ ಕುಮಾರ್ ಮಾತನಾಡಿದರು. ಈ ಹಿಂದೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪುರ (Providing Urban Amenities in Rural Areas) ಪರಿಕಲ್ಪನೆಯನ್ನು ನಗರಗಳಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣ ಭಾಗದ ಜನರಿಗೆ ದೊರೆಯುವ ಧ್ಯೇಯೋದ್ದೇಶದಿಂದ ಜಾರಿಗೆ ತಂದಿದ್ದರು ಅಂತೆಯೇ ನಮ್ಮ ಸಂಪಿಗೆ ಗ್ರಾಮದಲ್ಲಿ “ಸಂಪಿಗೆ ಗೌರಮ್ಮ ರುದ್ರಯ್ಯ ಮಕ್ಕಳ ಕಲ್ಯಾಣ ಟ್ರಸ್ಟ್” ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿ ಸುಸಜ್ಜಿತ ಕೇಂದ್ರವನ್ನ ಸ್ಥಾಪಿಸಿ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮನುಷ್ಯನು ತನ್ನ 5 ಕರ್ಮೇಂದ್ರಿಯಗಳಿಂದ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾನೆ. ಪ್ರತಿಯೊಂದು ಮಗು ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ನೋಡಿ ತಾನು ಅದರಂತಾಗಲು ಪ್ರಯತ್ನಿಸುತ್ತದೆ ಅಂತಹ ಸಂದರ್ಭದಲ್ಲಿ ಸರಿಯಾದ ಸೌಕರ್ಯ ನೀಡಲು ಪ್ರತಿಯೊಂದು ಮಗುವಿನಲ್ಲೂ ಒಬ್ಬ ವಿಜ್ಞಾನಿ ಇರುತ್ತಾನೆ ಎಂಬುದನ್ನ ಅರಿತುಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ಪೋಷಕರಿಗೂ ಕೂಡ ತಮ್ಮ ಮಕ್ಕಳ ಪ್ರತಿಭೆಯ ಬಗ್ಗೆ ಮಾಹಿತಿ ಮತ್ತು ಅಂತಹ ಮಕ್ಕಳಿಗೆ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆಗಳ ರಾಜ್ಯ ಸಚಿವ ಮತ್ತು ತುಮಕೂರು ಸಂಸದರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣನವರು ಮಾತನಾಡಿ ಸಂಪಿಗೆ ಗ್ರಾಮದಲ್ಲಿ ಸಂಪಿಗೆ ಗೌರಮ್ಮ ರುದ್ರಯ್ಯ ಮಕ್ಕಳ ಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಗ್ರಾಮೀಣ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕರಿಸುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು ಅಲ್ಲದೆ ಅವರ ಜೊತೆಗೆ ನಾವು ಕೈಜೋಡಿಸಬೇಕು ಅವರ ಈ ಸೇವೆ ಹೀಗೆ ನಿರಂತರವಾಗಿ ಮುಂದುವರಿಯುವ ನಿಟ್ಟಿನಲ್ಲಿ ಸದರಿ ಗ್ರಾಮ ಪಂಚಾಯಿತಿಗೆ ಟ್ರಸ್ಟಿನ ಮೇಲ್ವಿಚಾರಣೆ ವಹಿಸಲಾಗುವುದು ಎಂದರು. ತುರುವೇಕೆರೆ ಶಾಸಕರಾದ ಮಾನ್ಯ ಶ್ರೀ ಎಂ.ಟಿ ಕೃಷ್ಣಪ್ಪನವರು ಮಾತನಾಡಿ ನಾವು ನಗರಗಳಲ್ಲಿ ಉದ್ಯಾನವನ ನೋಡಿದ್ದೇವೆ ಆದರೆ ಹಳ್ಳಿಗಳಲ್ಲಿ ಇಂತಹ ಕ್ರಿಯಾಶೀಲ ಉದ್ಯಾನವನ್ನು ನೋಡುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ತನ್ನ ಹುಟ್ಟೂರಿಗೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಈ ಸಾರ್ಥಕ ಕೆಲಸವನ್ನ ಸಂಪಿಗೆ ಗೌರಮ್ಮ ರುದ್ರಯ್ಯ ಮಕ್ಕಳ ಕಲ್ಯಾಣ ಟ್ರಸ್ಟ್ ಮಾಡಿದೆ ಅವರನ್ನು ನಾವು ಎಂದೆಂದೂ ನೆನೆಯಬೇಕು ನಮ್ಮ ತಾಲೂಕಿನಲ್ಲಿ ಅನೇಕ ಅಧಿಕಾರಿಗಳು ಇದ್ದಾರೆ ಅವರು ಕೇವಲ ಸ್ವ ಹಿತವನ್ನು ನೋಡುತ್ತಿದ್ದಾರೆ ಹೊರತು ಸಾಮಾಜಿಕ ಹಿತ ನೋಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆಗಳ ರಾಜ್ಯ ಸಚಿವ ಮತ್ತು ತುಮಕೂರು ಸಂಸದರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣನವರು, ಮಾಜಿ ಇಸ್ರೋ ಅಧ್ಯಕ್ಷರಾದ ಶ್ರೀ ಎ .ಎಸ್ ಕಿರಣ್ ಕುಮಾರ್, ತುರುವೇಕೆರೆಯ ಶಾಸಕರಾದ ಮಾನ್ಯ ಶ್ರೀ ಎಂ.ಟಿ ಕೃಷ್ಣಪ್ಪನವರು, ಟ್ರಸ್ಟಿಗಳಾದ ಶ್ರೀ ಆರ್ ಸದಾನಂದಮೂರ್ತಿ, ಶ್ರೀ ಚೇತನ್ ಪರಮೇಶ್ವರಯ್ಯ , ಹಿರಿಯ ಪತ್ರಕರ್ತರಾದ ಶ್ರೀ ಎಸ್ ಆರ್ ಆರಾಧ್ಯ ಉಪಸ್ಥಿತರಿದ್ದರು ಹಾಗೂ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು ಸಂಗಂ ಹಿರೇಮಠ್ ಗ್ರಾಮದ ಹಿರಿಯರು, ಮುಖಂಡರು ಹಾಗೂ ಗ್ರಾಮಸ್ಥರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ
